ಬಿಜೆಪಿ, ಜೆಡಿಎಸ್‌ಗೆ ಹೊಟ್ಟೆಯುರಿ ಶುರುವಾಗಿದೆ

0
9
ಸಿದ್ದು

ಚಿಕ್ಕೋಡಿ: ನಮ್ಮ ಪಕ್ಷ ಬಸವಾದಿ ಶರಣರ ಆಶಯದಂತೆ ನಡೆಯುವ ಸರಕಾರ. ಚುನಾವಣೆ ವೇಳೆ ನೀಡಿದ ಎಲ್ಲ ಭರವಸೆಯನ್ನು ಈಡೇರಿಸುವ ಮೂಲಕ ಬಸವಾದಿ ಶರಣರ ಆಶಯದಂತೆ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಚುನಾವಣೆ ವೇಳೆ ನಾವು ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಇವೆಲ್ಲ ಸಾಧ್ಯವಿಲ್ಲದ ಭರವಸೆ ಎಂದು ವಿರೋಧ ಪಕ್ಷಗಳು ಭಾವಿಸಿದ್ದವು.
ಆದರೆ, ನಾವು ಸರಕಾರ ರಚನೆ ಆದ ಮೊದಲ‌ ಬಜೆಟ್ ನಲ್ಲೇ ಎಲ್ಲ ಐದು ಗ್ಯಾರಂಟಿ ಜಾರಿ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿದ 76 ಭರವಸೆಗಳ ಜಾರಿಗೆ ಕ್ರಮ ಕೈಗೊಂಡಿದ್ದೇವೆ.
ಇದರಿಂದ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಹೊಟ್ಟೆಯುರಿ ಶುರುವಾಗಿದೆ. ಡಬಲ್ ಇಂಜಿನ್ ಸರಕಾರ ಇದ್ದರೂ ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಈಗ ಹಲಬುತ್ತಿದೆ. ಹೊಟ್ಟೆಕಿಚ್ಚಿನಿಂದ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡುತ್ತಿವೆ. ಈ ಆರೋಪಗಳು ಸತ್ಯಕ್ಕೆ ದೂರಾಗಿವೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿಯ ಭ್ರಷ್ಟಾಚಾರ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಬಂದತೆ. ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರ, ದುರಾಡಳಿತ ಮೂಲಕ ರಾಜ್ಯವನ್ನು ಅಧೋಗತಿಗೆ ತಳ್ಳಿದರು. ಯಾವುದೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಈಗ ನಮ್ಮ ಸರಕಾರ ಐದು ಗ್ಯಾರಂಟಿ ಜಾರಿ ಜೊತೆಗೆ ರಾಜ್ಯದ ಅಭಿವೃದ್ಧಿಗೆ ವೇಗ ನೀಡಿದೆ ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಕೇವಲ ಭಾಷಣ ಮಾಡಿ, ಜನರ ಜೇಬಿನಿಂದ ಹಣ ಕಿತ್ತುಕೊಳ್ಳುವ ಕೆಲಸ ಮಾಡ್ತಾರೆ. ಆದರೆ ನಾವು ಜನರಿಗೆ ಹಣ ಒದಗಿಸುವ ಮೂಲಕ ಜನರ ಹಾಗೂ ಸರಕಾರದ ಆದಾಯ ಹೆಚ್ಚಿಸಲು ಐದು ಗ್ಯಾರಂಟಿ ಜಾರಿಗೊಳಿಸುತ್ತಿದ್ದೇವೆ. ಈಗಾಗಲೆ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಅನುಷ್ಠಾನಗೊಂಡಿದ್ದು, ಸದ್ಯದಲ್ಲೇ ಗೃಹಜ್ಯೋತಿ, ಯುವನಿಧಿ ಯೋಜನೆಗಳೂ ಜಾರಿಗೆ ಬರಲಿವೆ. ಈ ಯೋಜನೆಗಳಿಂದ ಜನರ ಕೈಗೆ ಹಣ ಬಂದು ಕೊಳ್ಳುವ ಶಕ್ತಿ ಹೆಚ್ಚಾಗಿ ವ್ಯಾಪಾರ ವಹಿವಾಟು ಹೆಚ್ಚಳಗೊಳ್ಳಲಿದೆ. ಇದರಿಂದ ರಾಜ್ಯದ ಜಿಡಿಪಿಯೂ ಅಧಿಕವಾಗಲಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 30 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 1.30 ಕೋಟಿ ರೂ.ಕ್ಕೂ‌ ಹೆಚ್ಚು ಕುಟುಂಬಗಳಿಗೆ ಪ್ರತಿತಿಂಗಳು 2 ಸಾವಿರ ರೂ. ಸಿಗಲಿದೆ. ಒಂದು ವರ್ಷದಲ್ಲಿ 35 ಸಾವಿರ ಕೋಟಿ ರೂಪಾಯಿ ಮಹಿಳೆಯರಿಗೆ ತಲುಪಲಿದೆ ಎಂದು ಹೇಳಿದರು.
ನಮ್ಮ ಸಮಾಜ ಕೃಷಿ ಆಧರಿತ. ಜಾನವಾರು ಸಂಪತ್ತು ಬಹಳಷ್ಟಿದೆ. ಹಾಲು ಉತ್ಪಾದನೆಯಲ್ಲಿ
ಗುಜರಾತ್ ನಂತರ ಎರಡನೆ ಸ್ಥಾನದಲ್ಲಿದೆ. ದುರದೃಷ್ಟವಶಾತ್ ಹಿಂದಿನ ಸರಕಾರ ವೆಟರ್ನರಿ ವೈದ್ಯರನ್ನು ನೇಮಿಸಿಲ್ಲ. ರಾಜ್ಯದಲ್ಲಿ
ಇನ್ನೂ ಹೆಚ್ಚಿನ ಕಾಲೇಜು ಸ್ಥಾಪನೆ ಆಗಬೇಕು. ಲಕ್ಷ್ಮಣ ಸವದಿ ಅವರು ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮೂಲಕ ತಮಗಿರುವ ರೈತಪರ ಕಾಳಜಿ ತೋರಿಸಿದ್ದಾರೆ ಎಂದರು.
ಲಕ್ಷ್ಮಣ ಸವದಿ ಹಿಂದಿನಿಂದಲೂ ನನಗೆ ಸ್ನೇಹಿತರು. ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಅವರು ಕಾಂಗ್ರೆಸ್ ಗೆ ಬಂದಿದ್ದರಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಅವರಿಂದ ಹಲವು ಕ್ಷೇತ್ರ ಗೆಲ್ಲಲು ಸಾಧ್ಯವಾಯಿತು. ಅವರಿಗೆ ಸರಕಾರ ಹಾಗೂ ಪಕ್ಷದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ, ಸಣ್ಣ ನೀರಾವರಿ ಸವ ಭೋಜರಾಜು, ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

Previous articleಅನೈತಿಕ‌‌ ಸಂಬಂಧ ಶಂಕೆ, ಪತಿಯಿಂದಲೇ ಪತ್ನಿ ಹತ್ಯೆ
Next articleವಿದ್ಯಾಕಾಶಿ ಧಾರವಾಡದಲ್ಲಿ ಹಾಡಹಗಲೇ ಮೂವರಿಗೆ ಚಾಕು ಇರಿತ