ಕುಷ್ಟಗಿ: ಜಮೀನಿನಲ್ಲಿ ಹಸಿರು ಕಾಣಿಸಿದರೂ ರೈತ ಇಳುವರಿ ಇಲ್ಲದೆ ಬೆಳೆ ಹಾನಿ ಆಗಿರುವ ಬಗ್ಗೆ ಬರ ಪರಿಸ್ಥಿತಿಯನ್ನು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ೨,೩೮,೦೮೬ ಹೆಕ್ಟೇರ್ ಕೃಷಿ ಬೆಳೆ, ೧೧,೯೭೫ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ. ಒಟ್ಟು ೧,೪೩,೭೯೨ ಲಕ್ಷ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದು ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಬರ ಪರಿಸ್ಥಿತಿಯ ಕೇಂದ್ರ ಬರ ಅಧ್ಯಯನ ತಂಡ ತಾಲೂಕಿನ ಚಳಗೇರಾ ಗ್ರಾಮದ ರೈತರಾದ ಬಸಮ್ಮ ವೀರಭದ್ರಪ್ಪ ಗಾಣಿಗೇರ ಹಾಗೂ ಓಂಪ್ರಕಾಶ ದೊಡ್ಡಯ್ಯ ಮರದ,ಶರಣಪ್ಪ ಸೋಮಪ್ಪ ಬಾರಕೇರ ಅವರ ಕೃಷಿ ಜಮೀನಿಗೆ ಭೇಟಿ ನೀಡಿ ತೋಟಗಾರಿಕೆ ಬೆಳೆ, ಕೃಷಿ ಹೊಂಡ ವೀಕ್ಷಣೆ ಮಾಡಿದ ಬಳಿಕ ಮಾತನಾಡಿ, ೧೪೩೦ ಕೋಟಿ ರೂ.ದಷ್ಟು ಹಾನಿಯಾಗಿದ್ದು, ಆದರೆ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಸರಕಾರ ಕೊಪ್ಪಳ ಜಿಲ್ಲೆಗೆ ೨೧೬ ಕೋಟಿ ರೂ. ಪರಿಹಾರ ಸಿಗುವ ಬರವಸೆ ಇದೆ. ಪ್ರತಿ ಹೆಕ್ಟರ್‌ಗೆ ೮,೫೦೦ ರೂ. ಬೆಳೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್, ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ, ಸಂಸದ ಸಂಗಣ್ಣ ಕರಡಿ, ತಹಶೀಲ್ದಾರ ಶ್ರುತಿ ಮಳ್ಳಪ್ಪಗೌಡ್ರ, ತೋಟಗಾರಿಕೆ ಇಲಾಖೆಯ ಅಧಿಕಾರಿ ಕೃಷ್ಣ ಉಕ್ಕುಂದ, ದುರ್ಗಾ ಪ್ರಸಾದ್, ತಿಪ್ಪೇಸ್ವಾಮಿ, ಚಳಗೇರಾ ಗ್ರಾಪಂ ಪಿಡಿಒ ಬಸವರಾಜ ಸಂಕನಾಳ ಸೇರಿದಂತೆ ಅನೇಕರು ಇದ್ದರು.