ಬರಪೀಡಿತ ರಾಜ್ಯ ಘೋಷಣೆಗೆ ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯ

0
12

ದಾವಣಗೆರೆ: ರಾಜ್ಯದಲ್ಲಿ ಸಮಯಕ್ಕೆ ಸರಿಯಾಗಿ ಮಳೆಬಾರದೆ ಜಲಾಶಯಗಳು ಬತ್ತಿ ಹೋಗಿದ್ದು, ಬಿತ್ತನೆ ಕಾರ್ಯಕ್ಕೂ ಗರ ಬಡಿದಿದೆ. ಆದ್ದರಿಂದ, ರಾಜ್ಯವನ್ನು ಬರಪೀಡಿತ ರಾಜ್ಯ ಎಂದು ಘೋಷಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಗಿಲ್ಲ. ಎಲ್ಲೂ ಕೂಡ ಶೇಕಡಾ ೧೦ರಷ್ಟು ಬಿತ್ತನೆ ಕಾರ್ಯ ಪ್ರಾರಂಭವಾಗಿಲ್ಲ. ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆ. ಆದರೂ ಕೂಡ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಮೀನಾಮೇಶ ಎಣಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಜಲಾಶಯಗಳು ಬತ್ತಿ ಹೋಗಿದ್ದು, ಆದ್ದರಿಂದ ರಾಜ್ಯವನ್ನು ಬರಗಾಲ ಪೀಡಿತ ರಾಜ್ಯವೆಂದು ಘೋಷಣೆ ಮಾಡಲು ನಮ್ಮವರು ಸದನದ ಒಳಗು ಹೊರಗು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇನ್ನಾದರು ಸರ್ಕಾರ ಕಣ್ಣು ತೆರೆಯಲಿ ವಿಳಂಬ ನೀತಿ ಅನುಸರಿಸದೆ ರಾಜ್ಯದ ಭೀಕರ ಪ್ರದೇಶಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ನಮ್ಮ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಹೇಳಿಕೆಯನ್ನು ಸ್ವಾಗತಿಸಿದ ಬಿಎಸ್‌ವೈ, ನಮ್ಮ ಸರ್ಕಾರ ಯಾವುದೇ ಭ್ರಷ್ಟಾಚಾರ ನಡೆಸಿಲ್ಲ ಎಂಬ ಖಾತರಿ ರಾಜ್ಯದ ಜನರಿಗಿದೆ ಎಂದರು.
ಕಾಂಗ್ರೆಸ್ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ಅವುಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಸರ್ಕಾರ ನೀಡಿದ ಗ್ಯಾರಂಟಿಗಳನ್ನ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ತನಕ ಸದನದ ಒಳ ಮತ್ತು ಹೊರಗೆ ನಿರಂತರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Previous articleಲೋಕಸಭಾ ಚುನಾವಣೆ ಹಿನ್ನೆಲೆ ಆಯ್ಕೆ ವಿಳಂಬ
Next articleಮಹಿಳೆ ಸಶಕ್ತರಾದರೆ ದೇಶ ಸಶಕ್ತವಾದಂತೆ ಕ್ರಿಶನ್ ಪಾಲ್ ಗುರ್ಜರ್