ಶಿವಕುಮಾರ ಹಳ್ಯಾಳ
ಹುಬ್ಬಳ್ಳಿ: ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ, ಟೀಂ ಇಂಡಿಯಾದ ವಿಕೆಟ್ ಕೀಪರ್, ಬ್ಯಾಟ್ಸಮನ್ ಆಗಿ ಮಿಂಚುತ್ತಿರುವ ಕೆ.ಎಲ್. ರಾಹುಲ್ ತಮ್ಮ ಹೃದಯವಂತಿಕೆ ಮೂಲಕ ಭಾರಿ ಸುದ್ದಿಯಾಗಿದ್ದಾರೆ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಡ ವಿದ್ಯಾರ್ಥಿಗೆ `ಬಿ.ಕಾಂ. ವಿಥ್ ಸಿಎ’ ಶಿಕ್ಷಣ ಪಡೆಯಲು ಹಣಕಾಸಿನ ನೆರವು ಒದಗಿಸಿದ್ದಾರೆ.
ತಮ್ಮ ಊರಿನ ಮೊದಲ ಲೆಕ್ಕ ಪರಿಶೋಧಕ ಎಂದು ಕರೆಸಿಕೊಳ್ಳುವುದು ಯುವಕ ಅಮೃತ ಮಾವಿನಕಟ್ಟಿ ಕನಸು ಸಾಕಾರಾಗೊಳಿಸಲು ಟೀಂ ಇಂಡಿಯಾದ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ನೆರವಿನ ಹಸ್ತ ಚಾಚಿದ್ದಾರೆ.
ಬಾಲ್ಯದಲ್ಲಿಯೇ ತಾಯಿ ಕಳೆದುಕೊಂಡ ಅಮೃತ ದೊಡ್ಡಪ್ಪನ ಆಶ್ರಯದಲ್ಲಿ ಬೆಳೆದರು. ಈಗ ಪಿಯುಸಿ ವಾಣಿಜ್ಯ ವಿಷಯದಲ್ಲಿ ಅಮೃತ ೬೦೦ಕ್ಕೆ ೫೭೧ ಅಂಕಗಳನ್ನು ಪಡೆದಿದ್ದರು. ಆದರೆ, ಬಿ.ಕಾಂ ಪದವಿ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ದಿಕ್ಕು ತೋಚದಾಗಿದ್ದರು. ಈ ವೇಳೆ ಮಹಾಲಿಂಗಪುರದ ನಿತಿನ್ ಹಾಗೂ ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ ಹೆಬಸೂರ ತಮ್ಮಿಂದ ಕೈಲಾದ ನೆರವು ಒದಗಿಸಲು ಚಿಂತನೆ ಮಾಡಿದ್ದಾರೆ.
ಹುಬ್ಬಳ್ಳಿಯ ಮಂಜುನಾಥ್ ಹೆಬಸೂರ ಅವರು ತಮ್ಮ ಆತ್ಮೀಯ ಸ್ನೇಹಿತ ಅಕ್ಷಯ್ ಅವರಿಗೆ ವಿಷಯ ತಿಳಿಸಿದಾಗ ಅವರು ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರೊಂದಿಗೆ ಅದ್ಹೇಗೊ ಸಂಪರ್ಕ ಸಾಧಿಸಿ ಬಡ ವಿದ್ಯಾರ್ಥಿಯ ಪರಿಸ್ಥಿಯನ್ನು ವಿವರಿಸಿದ್ದರಂತೆ. ವಿದ್ಯಾರ್ಥಿ ಸ್ಥಿತಿ ತಿಳಿದ ರಾಹುಲ್ ಆತನ ಶಿಕ್ಷಣಕ್ಕೆ ಬೇಕಾದ ಅಗತ್ಯವಾದ ಶುಲ್ಕವನ್ನು ಅಮೃತ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಸಹಾಯ ಹಸ್ತ ಚಾಚಿದ್ದಾರೆ.
ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ: ವಿದ್ಯಾರ್ಥಿ ಅಮೃತ ಕೆಎಲ್‌ಇ ಸಂಸ್ಥೆಯ ಬಿವಿಬಿಯಲ್ಲಿ ಬಿಕಾಂ ಜೊತೆಗೆ ಸಿಎ ಕೋಚಿಂಗ್ ವಿಷಯ ಆಯ್ಕೆ ಮಾಡಿಕೊಂಡಿದ್ದು, ಕಾಲೇಜು ಪ್ರವೇಶ ಶುಲ್ಕ ೮೫ ಸಾವಿರ ಇದ್ದು, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ್ದು ಮತ್ತು ಬಡ ವಿದ್ಯಾರ್ಥಿ ಎಂಬ ಕಾರಣಕ್ಕೆ ಕಾಲೇಜಿನವರು ೧೦ ಸಾವಿರ ರಿಯಾಯಿತಿ ನೀಡಿದ್ದಾರೆ. ಇನ್ನುಳಿದ ೭೫ ಸಾವಿರ ಶುಲ್ಕವನ್ನು ಕ್ರಿಕೆಟಿಗ ಕೆ.ಎಲ್ ರಾಹುಲ್ ಪಾವತಿಸಿದ್ದಾರೆ.
ನನ್ನ ಶಿಕ್ಷಣಕ್ಕೆ ಆರ್ಥಿಕ ತೊಂದರೆಯಾಗಿತ್ತು. ಇದನ್ನು ಮನಗಂಡು ನಿತಿನ್ ಹಾಗೂ ಮಂಜುನಾಥ ಹೆಬಸೂರ ಅವರು ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರನ್ನು ಸಂಪರ್ಕಿಸಿ ನನ್ನ ವಿದ್ಯಾಭ್ಯಾಸಕ್ಕೆ ನೆರವು ಒದಗಿಸಿದ್ದಾರೆ. ನಾನು ಅವರ ಬಳಿ ೫೦ ಸಾವಿರ ರೂ. ಮಾತ್ರ ಕೇಳಿದ್ದೆ. ಆದರೆ, ನನ್ನ ವ್ಯಾಸಂಗಕ್ಕೆ ಬೇಕಾಗುವ ಪುಸ್ತಕಕ್ಕೆ ಹಣ ಬೇಕಾಗುತ್ತದೆ ಎಂದು ೭೫ ಸಾವಿರ ಹಣವನ್ನು ಮಹಾಲಿಂಗಪುರದಲ್ಲಿ ಕೆನರಾ ಬ್ಯಾಂಕಿನಲ್ಲಿರುವ ನನ್ನ ಖಾತೆಗೆ ಮೂರು ದಿನದ ಹಿಂದೆ ಹಾಕಿದ್ದಾರೆ. ಅವರ ಈ ಸಹಾಯವನ್ನು ನಾನು ಎಂದೂ ಮರೆಯುವುದಿಲ್ಲ.
– ಅಮೃತ ಮಾವಿನಕಟ್ಟೆ, ವಿದ್ಯಾರ್ಥಿ.