ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಅವರು ಬಜೆಟ್ ಮಂಡಿಸಿದಕ್ಕಿಂತ ಬಿಜೆಪಿಗೆ ಬೈದಿದ್ದು ಹೆಚ್ಚು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಸಂಪೂರ್ಣ ತುಷ್ಟಿಕರಣ ಬಜೆಟ್ ಆಗಿದ್ದು, ಇದು ಅಭಿವೃದ್ಧಿ ಪೂರಕವಾದ ಬಜೆಟ್ ಅಲ್ಲ, ಬದಲಾಗಿ ಮೂಲಭೂತ ಸೌಕರ್ಯಗಳನ್ನು ನೆಲಕಚ್ಚುವ ಬಜೆಟ್ ಇದಾಗಿದೆ. ಶುಕ್ರವಾರ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದ್ದಾರಾ? ಅಥವಾ ಬಿಜೆಪಿಯನ್ನು ಟೀಕೆ ಮಾಡಿದ್ದಾರಾ ಅರ್ಥವಾಗುತ್ತಿಲ್ಲ, ಬಜೆಟ್ ಮಂಡನೆಗಿಂತ ಬಿಜೆಪಿಯನ್ನು ಟೀಕೆ ಮಾಡಿದ್ದೆ ಹೆಚ್ಚು ಎಂದರು.
ಕೋವಿಡ್ ನಿರ್ವಹಣೆ ಬಗ್ಗೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ದೇಶದಲ್ಲಿ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ. ಅಲ್ಲದೇ ಬೇರೆ ದೇಶಗಳಿಗೂ ಸಹ ಕೊಟ್ಟಿದ್ದೇವೆ. ಆದರೆ ಇದನ್ನು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿದರೇ ಸಿದ್ದರಾಮಯ್ಯ ಅವರು ಭಾರತ ದ್ವೇಷಿ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಇನ್ನು ಬಜೆಟ್’ನಲ್ಲಿ ಆಸ್ತಿ ಕರ ಏರಿಕೆ ಮಾಡಿದ್ದಾರೆ. ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲರಿಗೂ ಮದ್ಯಪಾನ ಮಾಡಿಸಿ ಹಣ ತಂದುಕೊಡಿ ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಕುಟುಕಿದರು.
ಎನ್ಇಪಿಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಆದರೆ ಇವತ್ತು ಅದನ್ನು ಕೈಬಿಡಲಾಗಿದೆ. ಇದು ಸಂಪೂರ್ಣ ತುಷ್ಟಿಕರಣ ಬಜೆಟ್ ಆಗಿದ್ದು, ಅಭಿವೃದ್ಧಿ ಪೂರಕವಲ್ಲ. ಶಾಸಕರಿಗೆ ಅನುದಾನ ಕೇಳಬೇಡಿ ಎಂದು ನೇರವಾಗಿ ಮುಖ್ಯಮಂತ್ರಿಗಳು ಹೇಳತ್ತಾರೆ ಎಂದರೆ ಕಾಂಗ್ರೆಸ್ ಯಾವ ಸ್ಥಿತಿಗೆ ಬಂದಿದೆ ಎಂಬುವುದಕ್ಕೆ ಇದೆ ಸಾಕ್ಷಿ ಎಂದರು.
ಯುವ ಶಕ್ತಿಗೆ ಬಜೆಟ್‌ನಲ್ಲಿ ನಯಾಪೈಸೆ ಹಣ ಇಟ್ಟಿಲ್ಲ, ಗೃಹಲಕ್ಷ್ಮಿಗೆ ಹಣ ಇಟ್ಟಿದ್ದಾರೆ. ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿಲ್ಲ. ಹತ್ತು ಕೆಜಿ ಅಕ್ಕಿ ಬಗ್ಗೆ ಬಜೆಟ್’ನಲ್ಲಿ ಹೇಳಿದ್ದಾರೆ. ಈ ಪೈಕಿ ಐದು ಕೆಜಿ ಕೇಂದ್ರ ಸರ್ಕಾರದಿದೆ. ಅವರೇನು ಕೊಡತ್ತಾರೆ ಎಂಬುವುದನ್ನು ಹೇಳುತ್ತಿಲ್ಲ. ಇದನ್ನು ನೋಡಿದರೇ ಸಿದ್ದರಾಮಯ್ಯ ಅವರು ಹಿಟ್ಲರ್ ರೀತಿಯಲ್ಲಿ ಆಡಳಿತ ಮಾಡಲು ತಿರ್ಮಾನ ಮಾಡಿದ್ದಾರೆ ಎಂದು ಹರಿಹಾಯ್ದರು.
ರಾಹುಲ್ ಗಾಂಧಿ ಅಪ್ರಬುದ್ದರು: ರಾಹುಲ್ ಗಾಂಧಿಗೆ ಕೋರ್ಟ್ ನಲ್ಲಿ ಮತ್ತೊಂದು ಹಿನ್ನಡೆಯಾಗದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಪ್ರಬುದ್ಧರಿದ್ದಾರೆ. ಟ್ರಯಲ್ ಕೋರ್ಟ್ ಶಿಕ್ಷೆ ನೀಡಿತ್ತು ನಂತರ ಜಿಲ್ಲಾ ಮತ್ತು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಲು ನಿರಾಕರಣೆ ಮಾಡಿದೆ. ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ ಇವರ ಹೋರಾಟ ಯಾರ ವಿರುದ್ಧ ಹೈಕೋರ್ಟ್ ವಿರುದ್ಧನಾ ಎಂದು ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದರು.
57-58 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ಗೆ ಪ್ರಜ್ಞೆಯಿದೆಯಾ.. ಟ್ರಯಲ್ ಕೋರ್ಟ್ ನಲ್ಲಿ ಕ್ಷಮೆ ಯೋಚಿಸುವಂತೆ ಸಲಹೆ ಕೊಟ್ಟಾಗ ರಾಹುಲ್ ನಾನು ಅಂದದ್ದೆ ಸರಿ ಅಂತ ಸಮರ್ಥನೆ ಮಾಡಿ. ನನ್ನ ಹೇಳಿಕೆ ವಾಪಸು ಪಡೆಯಲ್ಲಾ ಅಂದರು. ರಾಹುಲ್ ಗಾಂಧಿ ಅಪ್ರಬುದ್ಧತೆ ಮತ್ತು ಅಹಂಕಾರ ದಿಂದ ಆಗಿರುವಂತದ್ದು. ಕಾಂಗ್ರೆಸ್ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಮೊದಲು ರಾಹುಲ್ ಗಾಂಧಿ ಹೋಗಿ ಬುದ್ಧಿ ಹೇಳಲಿ. ರಾಹುಲ್ ಗಾಂಧಿ ಬುದ್ದಿಮತ್ತೆ ಕಡಿಮೆಯಿದೆ ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಕಿಡಿಕಾರಿದರು.
ಹೆಚ್ ಡಿಕೆ ಪೆನ್ ಡ್ರೈವ್ ಬಾಂಬ್ ವಿಚಾರ: ವರ್ಗಾವಣೆ ವಿಚಾರದಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವುದೊಂದು ಪ್ರಕರಣ ಸಿಕ್ಕಿರಬಹುದು ಹೀಗಾಗಿ ಹಾಗೇ ಹೇಳಿಕೆ ನೀಡುತ್ತರಬಹುದು. ಹರಾಜು ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತಿದೆ. ಪ್ರಮುಖ ಹುದ್ದೆಗಳಿಗೆ ಆಕ್ಷನ್ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ ಇದು ಎಲ್ಲೊ ಒಂದು ಕಡೆ ಹೊರಗೆ ಬರುತ್ತೆ ಎಂದರು.
ಹೆಚ್ ಡಿಕೆ ಅಧಿಕೃತ ವಿಪಕ್ಷನಾಯಕನ ರೀತಿ ಕೆಲಸ ಮಾಡುತ್ತಿದ್ದಾರೆಂಬ ವಿಚಾರವಾಗಿ ಮಾತನಾಡಿ, ಅವರು ಜೆಡಿಎಸ್ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಾರೆ. ಇಂದು ನಮ್ಮ ವಿರೋಧ ಪಕ್ಷದ ನಾಯಕರ ನಿರ್ಧಾರವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.