ವಿಜಯಪುರ: ಆರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲ 3345 ಶಾಲೆಗಳಿಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಾಣವಾಗಬೇಕು. ಅಂಗನವಾಡಿ ಕೇಂದ್ರಗಳನ್ನು ಪ್ಲೇ ಸ್ಕೂಲ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರು ತಿಂಗಳ ಅವಧಿಯಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ಶೌಚಾಲಯ ನಿರ್ಮಾಣವಾಗಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ವಿಷಯದಲ್ಲಿ ಎಡವಿದರೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದ್ದು, ಅಮಾನತು ಮಾಡಲು ಸಹ ಹಿಂದೇಟು ಹಾಕುವುದಿಲ್ಲ ಎಂದರು.
ಲೋಹಗಾಂವ ಬಳಿ ಅಂಗನವಾಡಿ ಕೇಂದ್ರವನ್ನು ಪ್ಲೇ ಸ್ಕೂಲ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಹೀಗಾಗಿ ಈ ಮಾದರಿಯಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಪ್ಲೇ-ಸ್ಕೂಲ್ ಮಾದರಿ ಅಭಿವೃದ್ಧಿಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಪಂ ಸಿಇಓ ರಾಹುಲ್ ಶಿಂಧೆ, ಈಗಾಗಲೇ ಅಂಗನವಾಡಿ ಕಟ್ಟಡಗಳಿಗೆ ನವ ಸ್ಪರ್ಶ ನೀಡುವ ನಿಟ್ಟಿನಲ್ಲಿ ವಿಶೇಷ ಸ್ವರೂಪ ನೀಡುವ ದೃಷ್ಟಿಯಿಂದ ವಾಸ್ತುಶಿಲ್ಪಿಗಳನ್ನು ಸಂಪರ್ಕಿಸಲಾಗಿದ್ದು ಮೂಲ ಸೌಕರ್ಯ ಕಲ್ಪಿಸಿ ಸ್ವರೂಪದಲ್ಲಿ ಸಂಪೂರ್ಣವಾಗಿ ಬದಲಾವಣೆ ಮಾಡಲು ಜಿಲ್ಲಾ ಪಂಚಾಯತ ಬದ್ಧವಾಗಿದೆ ಎಂದರು.