ಪ್ರವೀಣ್ ನೆಟ್ಟಾರು ಮನೆಯ ಗೃಹ ಪ್ರವೇಶ ನಾಳೆ

0
20

ಸುಳ್ಯ: ಕಳೆದ ವರ್ಷ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಬಿಜೆಪಿ ವತಿಯಿಂದ‌ ನಿರ್ಮಿಸಿ ನೀಡಿದ ನೂತನ ಮನೆ ಪೂರ್ಣಗೊಂಡಿದ್ದು ಗೃಹ ಪ್ರವೇಶಕ್ಕೆ ಸಿದ್ಧವಾಗಿದೆ.
ಪ್ರವೀಣ್ ಅವರ ಕನಸಾಗಿದ್ದ ಮನೆ ನನಸಾಗಿದ್ದು ಏಪ್ರಿಲ್ 27ರಂದು ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದ್ದು ಸಿದ್ಧತೆ ಪೂರ್ಣಗೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಹಾಗೂ ಬಿಜೆಪಿ ಮುಖಂಡರು ಪ್ರವೀಣ್ ಮನೆಗೆ ಆಗಮಿಸಿ ಗೃಹ ಪ್ರವೇಶದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದರು.
ಪ್ರವೀಣ್ ಅವರು ತಮ್ಮ ಜೀವಿತಾವಧಿಯಲ್ಲಿ ತಮ್ಮ ಹಳೆಯ ಮನೆಯಿದ್ದ ಜಾಗದಲ್ಲೇ ಹೊಸ ಮನೆಯನ್ನು ಕಟ್ಟುವ ಬಗ್ಗೆ ಕನಸು ಕಂಡಿದ್ದರು. ಆದರೆ ಆದರ ಕಾರ್ಯ ಪ್ರಾರಂಭಕ್ಕೆ ಮುನ್ನವೇ ದುಷ್ಕರ್ಮಿಗಳಿಂದ ಹತ್ಯೆಯಾದರು. ಪ್ರವೀಣ್ ಹತ್ಯೆಯಾದ ಬಳಿಕ ಅವರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ಮನೆ ಕಟ್ಟಲು ನೆರವಾಗುವ ಬಗ್ಗೆ ಮಾತು ನೀಡಿದ್ದರು. ಬಳಿಕ ಅವರೇ 2022ರ ನವೆಂಬರ್ 2ರಂದು ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಇದೀಗ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ 2800 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗಿದೆ. ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಪಕ್ಷದ ವತಿಯಿಂದ ಮನೆ ನಿರ್ಮಿಸಲಾಗಿದೆ.
ಮನೆಗೆ ‘ಪ್ರವೀಣ್ ನಿಲಯ’ ಎಂದು ಹೆಸರಿಡಲಾಗಿದೆ. ಏ. 27ರಂದು ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ ಬೆಳಿಗ್ಗೆ 8.45ರ ಶುಭ ಮುಹೂರ್ತದಲ್ಲಿ ಗೃಹ ಪ್ರವೇಶ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಜನಾ ಸಂಕೀರ್ತನೆ ನಡೆಯಲಿದೆ. ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನೇಮ ನಡೆಯಲಿದೆ.
ನವೆಂಬರ್ 2ರಂದು ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ನಳಿನ್ ಕುಮಾರ್ ಕಟೀಲು ಅವರು, ಮೇ ಅಂತ್ಯದೊಳಗೆ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು. ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪನಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು ಕೇವಲ ಐದೂವರೆ ತಿಂಗಳಲ್ಲಿ ಸುಂದರ ಮನೆ ನಿರ್ಮಿಸಲಾಗಿದೆ.
ಮನೆಗೆ ಭೇಟಿ ನೀಡಿ ಇಂದು ಸಿದ್ಧತೆ ಪರಿಶೀಲನೆ ಮಾತನಾಡಿದ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷವು ಪ್ರವೀಣ್ ನೆಟ್ಟಾರು ಅವರ ಮನೆಯ ಕನಸನ್ನು ನನಸು ಮಾಡಿದೆ. ನಾಳೆ ಗೃಹ ಪ್ರವೇಶ ನಡೆಯಲಿದೆ. ಎಲ್ಲಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾರ್ಯಕರ್ತರನ್ನು ಪಕ್ಷ ಎಂದೂ ಬಿಟ್ಟು ಕೊಡುವುದಿಲ್ಲ. ಅವರ ಕುಟುಂಬದ ಜೊತೆ ಪಕ್ಷ ಇದೆ ಎಂಬ ಆತ್ಮ ವಿಶ್ವಾಸ ತುಂಬುವ ಪ್ರಯತ್ನ ಪಕ್ಷ ಮಾಡಿದೆ ಎಂದರು.
ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಮಾತನಾಡಿ, ಮನೆ ನಿರ್ಮಾಣ ಮಾಡಬೇಕು ಎಂಬ ಪ್ರವೀಣ್ ಅವರ ಕನಸನ್ನು ಪಕ್ಷ ಇಂದು ನನಸು ಮಾಡಿದೆ. ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಮನೆ ನಿರ್ಮಿಸಿ ಕೊಟ್ಟಿದ್ದಾರೆ ಎಂದರು.

Previous articleಕಾಂಗ್ರೆಸ್‌ನದ್ದು 85 ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ
Next articleಕೈ ಬಿಡಲು ಮುಂದಾದ ಮಾಜಿ ಮೇಯರ್