ಪೊಲೀಸ್ ಠಾಣೆ ಸಮೀಪವೇ ಇರಿತ ಯುವತಿ ಸಾವು

0
20

ಮಂಗಳೂರು: ಹಾಡು ಹಗಲೇ ಪುತ್ತೂರು ನಗರ ಮಹಿಳಾ ಪೊಲೀಸ್ ಠಾಣೆ ಬಳಿ ಯುವತಿಯೊಬ್ಬಳಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಅಳಿಕೆ ನಿವಾಸಿ ಗೌರಿ(೨೦) ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಬಂದಿದ್ದ ಗೌರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿ ಪದ್ಮರಾಜ್ ಎಂಬಾತ ಏಕಾಏಕಿ ಯುವತಿ ಕತ್ತಿನ ಭಾಗಕ್ಕೆ ಮೂರು, ನಾಲ್ಕು ಸಲ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ಯುವತಿ ಬಿದ್ದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಜೀವನ್ಮರಣ ಹೋರಾಟದಲ್ಲಿದ್ದ ಯುವತಿಯನ್ನು ಕೂಡಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಹಾಡು ಹಗಲೇ ನಡೆದ ಕೃತ್ಯದಿಂದ ಜನತೆ ಬೆಚ್ಚಿದ್ದಾರೆ.
ಬಂಟ್ವಾಳ ತಾಲೂಕಿನ ಅಳಿಕೆ ನಿವಾಸಿ ೧೮ ವರ್ಷದ ಗೌರಿ ಎಂಬ ಯುವತಿಗೆ ಪದ್ಮರಾಜ್ ಎಂಬ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಪುತ್ತೂರು ಪೇಟೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ತಿಳಿಸಿದ್ದಾರೆ.

Previous articleಲೋಕಾ ಬಲೆಗೆ ಡಿಡಿಪಿಐ ಕಚೇರಿ ಸಿಬ್ಬಂದಿ
Next articleಶಾಲಾ ವಾಹನದಡಿ ಬಿದ್ದು ವಿದ್ಯಾರ್ಥಿನಿ ಸಾವು