ಪೂರ್ಣವಾಗಿ ಪಠ್ಯ ಪುಸ್ತಕ ಪರಿಷ್ಕರಣೆ

0
11

ಮಂಗಳೂರು: ಪೂರ್ಣವಾಗಿ ಪಠ್ಯ ಪುಸ್ತಕ ಪರಿಷ್ಕರಣೆಯಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರಕಾರ ಬದಲಾಯಿಸಿದ್ದ ಪಠ್ಯವನ್ನು ನಾವು ತುರ್ತಾಗಿ ಸ್ವಲ್ಪ ಬದಲಾವಣೆ ಮಾಡಿ ಮೊದಲು ಇದ್ದಂತೆ ತಂದಿದ್ದೇವೆ. ಮುಂದಿನ ವರ್ಷ ಮಕ್ಕಳಿಗೆ ಅನುಕೂಲವಾಗುವಂತೆ ಪೂರ್ಣ ಬದಲಾಯಿಸುತ್ತೇವೆ ಎಂದರು.
ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದೇನೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಈ ತೀರ್ಮಾನ ಮಾಡಲಾಗಿದೆ. ಇದರಲ್ಲಿ ಬಿಜೆಪಿಯವರು ಹೇಳುವ ಯಾವುದೇ ರಾಜಕೀಯ ಇಲ್ಲ. ಪಠ್ಯ ಪರಿಷ್ಕರಣೆ ವಿಚಾರವಾಗಿ ತಜ್ಞರ ಸಮಿತಿಯ ಸಹಾಯ ಪಡೆದು ಅವಶ್ಯಕತೆ ಇದ್ದಲ್ಲಿ ಬದಲಾವಣೆ ಮಾಡುತ್ತೇವೆ. ಯಾವುದೇ ರಾಜಕೀಯ ಉದ್ದೇಶ ಇಲ್ಲದೆ ಬದಲಾವಣೆ ಆಗಲಿದೆ. ಮುಖ್ಯಮಂತ್ರಿಗಳ ಸಲಹೆ ಪಡೆದು ಅವರ ಸಹಕಾರದಿಂದ ಎಲ್ಲವೂ ಆಗಲಿದೆ. ಮಕ್ಕಳಿಗೆ ಉತ್ತಮ ಮತ್ತು ತಿಳುವಳಿಕೆಯ ಪಠ್ಯಗಳು ಇರಬೇಕು ಎಂದರು.
ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಇದೇ ನೀಚ ಬುದ್ದಿ ಮುಂದುವರೆಸಿಕೊಂಡು ಹೋಗಲಿ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಅವರ ಭಾವನಾತ್ಮಕ ನಾಟಕಕ್ಕೆ ರಾಜ್ಯದ ಜನ ಬುದ್ಧಿ ಕಲಿಸಿದ್ದಾರೆ. ಬಿಜೆಪಿಯನ್ನು ಸೋಲಿಸಿ ಜನರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಬಿಜೆಪಿಯವರ ಜೀವನ ನಡೆಯುವುದು ಕೂಡ ನಮ್ಮ ಗ್ಯಾರಂಟಿ ಮೇಲೆ ಎಂದು ವ್ಯಂಗ್ಯವಾಡಿದರು.
ಸದ್ಯ ಮಕ್ಕಳ ಪೌಷ್ಟಿಕತೆಗಾಗಿ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಸರ್ಕಾರ ಇದನ್ನು ಮಾಡಿದೆ. ಶಿಕ್ಷಕರ ಕೊರತೆ ರಾಜ್ಯದಲ್ಲಿ ಇದೆ, ಅದನ್ನ ನಾವು ಸರಿ ಮಾಡುತ್ತೇವೆ. ಇದರ ನಡುವೆ ದಾಖಲೆ ಪ್ರಮಾಣದಲ್ಲಿ ೨೫ ಸಾವಿರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಶೀಘ್ರವೇ ೧೩,೫೦೦ ಶಿಕ್ಷಕರ ನೇಮಕಾತಿಯಾಗಲಿದೆ ಎಂದು.
ಬಿಜೆಪಿಯವರು ಸಭಾಧ್ಯಕ್ಷರ ಪೀಠವನ್ನೇ ಅವಮಾನಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ನಮ್ಮನ್ನ ಗೆಲ್ಲಿಸುತ್ತಾರೆ. ಕರಾವಳಿ ಭಾಗ ಕಲ್ಮಶ ಆಗಿದ್ದು ನಿಜ, ಆದರೆ ಮತ್ತೆ ಶಾಂತಿ ಸೌಹಾರ್ದತೆ ಬರಲಿದೆ. ನಮ್ಮ ಸರ್ಕಾರ ಅವೆಲ್ಲವನ್ನೂ ಸೌಹಾರ್ದತೆ ಮೂಡಿಸಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಸ್ವಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರಹಾಕಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ಹೇಳಿದ ಮಾತಿನ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ಹಿರಿಯರು ಅವರ ಮಾತುಗಳಲ್ಲಿ ಏನಾದರು ಇದ್ದರೆ ಗಮನಿಸಬೇಕು. ಅವರ ಮಾತಿಗೆ ನಾನು ಪ್ರತಿಕ್ರಿಯೆ ಕೊಡುವುದು ಸರಿ ಅಲ್ಲ. ಅದು ಪಕ್ಷದ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದ ವಿಚಾರ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Previous articleಮತ್ತೆ ನೈತಿಕ ಪೊಲೀಸ್ ಗಿರಿ: ಇಬ್ಬರ ಸೆರೆ
Next articleಕಿಂಗ್‌ ಕೊಹ್ಲಿ ಭೇಟಿಯಾಗಿ ಭಾವುಕರಾದ ಅಭಿಮಾನಿ