ಬೆಳಗಾವಿ: ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ.
ಒಟ್ಟಾಗಿ ಆಗಮಿಸುತ್ತಿರುವ ಸಚಿವ ದ್ವಯರನ್ನು ಸ್ವಾಗತಿಸಲು ಇಡೀ ಬೆಳಗಾವಿ ಮಹಾನಗರ ಸಜ್ಜಾಗಿದ್ದು, ವಿಮಾನ ನಿಲ್ದಾಣದಿಂದಲೇ ಬೃಹತ್ ರ್ಯಾಲಿ ಮೂಲಕ ನಗರಕ್ಕೆ ಕರೆತರಲು ಕಾರ್ಯಕರ್ತರು, ಅಭಿಮಾನಿಗಳು ನಿರ್ಧರಿಸಿದ್ದಾರೆ.
ಮೇ 20ರಂದು ಸತೀಶ್ ಜಾರಕಿಹೊಳಿ ಹಾಗೂ ಮೇ 27ರಂದು ಲಕ್ಷ್ಮೀ ಹೆಬ್ಬಾಳಕರ್ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಬ್ಬರೂ ಈ ಸರಕಾರದ ಸಚಿವರಾದ ನಂತರ ಮೊದಲಬಾರಿಗೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ 10.30ಕ್ಕೆ ಇಬ್ಬರೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇಬ್ಬರೂ ಸಚಿವರನ್ನು ಅದ್ಧೂರಿಯಾಗಿ ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಿ ಕರೆತರಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಿರ್ಧರಿಸಿದ್ದಾರೆ. ವಿಮಾನ ನಿಲ್ದಾಣದಿಂದಲೇ ಬೈಕ್ ರ್ಯಾಲಿ ಮೂಲಕ ಸಚಿವ ದ್ವಯರನ್ನು ನಗರಕ್ಕೆ ಕರೆತರಲಾಗುತ್ತಿದೆ. ಬೆಳಗಾವಿಗೆ ಆಗಮಿಸಿದ ನಂತರ ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧೀಜಿ ಸೇರಿದಂತೆ ಮಹಾನ್ ವ್ಯಕ್ತಿಗಳ ಪುತ್ಥಳಿಗಳಿಗೆ ಸಚಿವರು ಮಾಲಾರ್ಪಣೆ ಮಾಡಲಿದ್ದಾರೆ.

























