ನೂತನ ಶಾಸಕರಿಗೆ ತರಬೇತಿ: ಪೂರ್ವಾಗ್ರಹ ಪೀಡಿತ ಚರ್ಚೆ ಸರಿಯಲ್ಲ

0
11

ಮಂಗಳೂರು: ಈ ಸಲ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ತರಬೇತಿ GV ಶಿಬಿರದ ಬಗ್ಗೆ ಆಕ್ಷೇಪಿಸುವವರು ಶಿಬಿರ ನೋಡಿದ ಬಳಿಕ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಈಗಲೇ ಪೂರ್ವಾಗ್ರಹ ಪೀಡಿತ ಚರ್ಚೆ ಸರಿಯಲ್ಲ ಎಂದು ಸಭಾಪತಿ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಶಾಸಕರ ಶಿಬಿರದಲ್ಲಿ ಭಾಗವಹಿಸುವ ಕೆಲವು ಭಾಷಣಕಾರರ ಬಗ್ಗೆ ನಾಡಿನ ಚಿಂತಕರು, ಗಣ್ಯರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದರು.
ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಈ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಟಿ.ಬಿ. ಜಯಚಂದ್ರ, ಸುರೇಶ್ ಕುಮಾರ್ ಸೇರಿ ಸಂಸದೀಯ ಪಟುಗಳು ತರಬೇತಿ ನೀಡಲಿದ್ದಾರೆ. ಮಾಜಿ ಸ್ಪೀಕರ್‌ಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಕೂಡ ನೂತನ ಶಾಸಕರೊಂದಿಗೆ ಸಂವಾದ ನಡೆಸಲಿದ್ದಾರೆ. ಅದರ ಜೊತೆಗೆ ಒತ್ತಡ ರಹಿತ ಕೆಲಸ ನಿರ್ವಹಣೆ ಬಗ್ಗೆ ತಿಳಿಸಲು ಕೆಲ ಆಧ್ಯಾತ್ಮಿಕ ವ್ಯಕ್ತಿಗಳನ್ನು ಕೂಡ ಕರೆದಿದ್ದೇವೆ. ಆದರೆ ಅವರಲ್ಲಿ ಕೆಲವರು ಆಗಮಿಸುವುದು ಇನ್ನೂ ದೃಢಪಟ್ಟಿಲ್ಲ. ರವಿಶಂಕರ್ ಗುರೂಜಿ ಊರಲ್ಲೇ ಇಲ್ಲ, ಅವರು ಅಮೆರಿಕದಲ್ಲಿದ್ದಾರೆ ಎಂದು ವಿವರಿಸಿದರು.
ಈ ಶಿಬಿರದ ಬಗ್ಗೆ ಯಾವುದೇ ವಿಚಾರ ಇದ್ದರೂ ಈಗಲೇ ಹೇಳಿಕೆಗಳನ್ನು ನೀಡುವುದು ಪ್ರಬುದ್ಧತೆ ಅಲ್ಲ. ತರಬೇತಿ ಶಿಬಿರ ನೋಡಿದ ಬಳಿಕ ಆ ಬಗ್ಗೆ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಪೂರ್ವಾಗ್ರಹಪೀಡಿತ ಚರ್ಚೆ ಸರಿಯಲ್ಲ ಎಂದ ಅವರು, ಸಾಮಾಜಿಕ ತಾಣಗಳಲ್ಲಿ ಸ್ಪಷ್ಟತೆ ಇಲ್ಲದೇ ಬರೆಯುವುದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ ಎಂದರು.

Previous articleಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ
Next articleಹಣದಾಸೆಗೆ ಹೂಡಿಕೆ ಮಾಡಿಸಿದ್ದ ಶಿಕ್ಷಕ ಆತ್ಮಹತ್ಯೆ