ನಿರಂತರ ಧರಣಿ 45ನೇ ದಿನಕ್ಕೆ

0
13

ಮಂಡ್ಯ :- ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಹೋರಾಟ 45ನೇ ದಿನವೂ ಮುಂದುವರೆಯಿತು.
ನಗರದ ಸರ್ ಎಂ ವಿ ಪ್ರತಿಮೆ ಎದುರು ನಿರಂತರ ಧರಣಿ ಮುಂದುವರಿಸಿದ ಸಮಿತಿಯ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುನಂದ ಜಯರಾಂ ಮಾತನಾಡಿ, ಕಾವೇರಿ ವಿಚಾರವನ್ನು ಆಳುವ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ, ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುನ್ನಡೆಯಲು ಮುಂದಾಗಿಲ್ಲ, ಹೋರಾಟಗಾರರ ಜೊತೆಗೆ ಮಾತುಕತೆ ನಡೆಸುತ್ತಿಲ್ಲ ಎಂದು ದೂರಿದರು.
ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಕರೆಯಬೇಕು, ಅಧಿವೇಶನದಲ್ಲಿ ಕಾವೇರಿ ವಿಚಾರವಾಗಿ ಸಮಗ್ರ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕು,ಆದರೆ ಪ್ರಧಾನಿರನ್ನ ಭೇಟಿಯಾಗಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ, ಕೇಂದ್ರ ಸರ್ಕಾರ ಸಹ ಮಲತಾಯಿ ಧೋರಣೆ ಮುಂದುವರಿಸಿದೆ ಎಂದು ಹೇಳಿದರು.
ಕಾವೇರಿ ಚಳವಳಿಯನ್ನು ತೀವ್ರ ಗೊಳಿಸಲು ನಿರ್ಧಾರ ಮಾಡಿದ್ದೇವೆ.ಅ 20 ರಿಂದ ಒಂದೊಂದು ಗ್ರಾಮ ಪಂಚಾಯತಿ ಪ್ರಾಪ್ತಿಯ ರೈತರು ಹಾಗೂ ನೂರಾರು ಜನತೆ ಭಾಗವಹಿಸಲಿದ್ದು ಇವರ ಜೊತೆಗೆ ಮಂಡ್ಯ ನಗರದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದರು.
ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡಪರ ಸಂಘಟನೆಯ ನಾರಾಯಣ್, ಕೋಮಲ ನೇತೃತ್ವ ವಹಿಸಿದ್ದರು.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಬಳಿಗೆ ನಿಯೋಗ:

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ರೈತರ ಮತ್ತು ಕರ್ನಾಟಕದ ಹಿತಕಾಯಲು ಕಾನೂನು ಅಭಿಪ್ರಾಯ ಸಂಗ್ರಹ ಮಾಡಲು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮುಂದಾಗಿದ್ದು, ಈ ಬಗ್ಗೆ ಅಭಿಪ್ರಾಯ ಪಡೆಯಲು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭೇಟಿಯಾಗಲು ಐವರ ನಿಯೋಗ ಬೆಂಗಳೂರಿಗೆ ತೆರಳಿದೆ.
ಪ್ರೊ.ಕೆ.ಸಿ.ಬಸವರಾಜ್, ಕೆ ಬೋರಯ್ಯ,ಮಾಜಿ ಶಾಸಕ ಕೆ.ಟಿ ಶ್ರೀಕಂಠೇಗೌಡ, ಕನ್ನಡ ಸೇನೆ ಮಂಜುನಾಥ್, ರೈತ ಸಂಘದ ಬೋರೇಗೌಡ ನಿವೃತ್ತ ನ್ಯಾಯಮೂರ್ತಿಗಳ ಬಳಿಗೆ ತೆರಳಿದ್ದು,ಕಾನೂನಿನ ಬಗ್ಗೆ ಅಭಿಪ್ರಾಯ ಪಡೆಯಲಿದ್ದಾರೆ.

Previous articleಈಜಲು ಹೋದ ಯುವಕ ಸಾವು
Next articleಸಾವಯವ ಬೆಲ್ಲ ಬಳಕೆಯಿಂದ ಆರೋಗ್ಯ ವೃದ್ಧಿ