ಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ ಅಲ್ಪ ಸುರಿದು ಮರೆಯಾಗಿದ್ದ ಮಳೆ ಮಂಗಳವಾರ ಬೆಳಿಗ್ಗೆಯಿಂದ ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿದೆ. ಜಿಟಿಜಿಟಿ ಮಳೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಯಿತು.
ಬೆಳಿಗ್ಗೆಯೇ ಮಳೆ ಧಾರಾಕಾರ ಸುರಿದಿದ್ದರಿಂದ ಶಾಲಾ ಮಕ್ಕಳು ಪರದಾಡಿದರು. ಸದಾ ವ್ಯಾಪಾರ ವ್ಯವಹಾರದಿಂದ ಗಿಜಿಗಿಡುತ್ತಿದ್ದ ನಗರದ ದುರ್ಗಬಯಲು, ದಾಜೀಬಾನ ಪೇಟೆ, ಕೊಪ್ಪೀಕರ ರಸ್ತೆ, ರೈಲ್ವೆ ಸ್ಟೇಶನ್ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತದ ಅಕ್ಕಪಕ್ಕದ ರಸ್ತೆಗಳು ಜನರಿಲ್ಲದೇ ಭಣಗುಟ್ಟವು. ವಾಹನ ಸಂಚಾರವೂ ಕ್ಷೀಣವಾಗಿತ್ತು. ಧಾರವಾಡ ನಗರದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ವಿದ್ಯಾರ್ಥಿಗಳು, ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಸಾರಿಗೆ ಸಂಸ್ಥೆ, ಬಿಆರ್‌ಟಿಎಸ್, ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರು, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣವಾಗಿತ್ತು.