ಧಾರವಾಡ: ಶಿಸ್ತುಬದ್ಧ ಪಕ್ಷಕ್ಕೆ ಇನ್ನೂ ಯಾವುದೇ ನಾಯಕರು ಸಿಕ್ಕಿಲ್ಲ. ಹೀಗಾಗಿ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಈವರೆಗೂ ಆಯ್ಕೆ ಮಾಡಿಲ್ಲ. ಆ ಸ್ಥಾನವನ್ನು ಹಣ ನೀಡುವವರಿಗೆ ನೀಡಬಹುದು ಎಂದು ಶಾಸಕ ವಿನಯ ಕುಲಕರ್ಣಿ ವ್ಯಂಗ್ಯವಾಡಿದರು.
ಸವದತ್ತಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕನ್ನು ಆಯ್ಕೆ ಮಾಡಲಾಗದ ಬಿಜೆಪಿ ಶಾಸಕರು ಸದನದ ಬಾವಿಯಲ್ಲಿ ನಮ್ಮ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಾಕಾರ ಮಾಡಲು ಆಗುತ್ತಿಲ್ಲ ಎಂದು ಧರಣಿ ಮಾಡಿದ್ದಾರೆ ಎಂದರು.
ಜನತೆ ನಮಗೆ ಈ ಬಾರಿ ಅತೀ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಇದಕ್ಕೆ ಕಾರಣ ಕಳೆದ ಬಾರಿ ಆಡಳಿತ ನಡೆಸಿದ ಸರ್ಕಾರದ ದುರಾಡಳಿತ ಕಾರಣ. ಚುನಾವಣೆ ಪೂರ್ವದಲ್ಲಿ ಸರ್ಕಾರ ಘೋಷಣೆ ಮಾಡಿದ ಎಲ್ಲ ಗ್ಯಾರಂಟಿಗಳನ್ನು ಜನರಿಗೆ ನೀಡಲಾಗುವುದು. ಇದು ನಮ್ಮ ಜವಾಬ್ದಾರಿ ಕೂಡ. ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿ ಹಾಗೂ ಇನ್ನು ಐದು ಕೆ.ಜಿ. ಅಕ್ಕಿ ಹಣವನ್ನು ನೀಡುವುದನ್ನು ಜನ ಸ್ವಾಗತಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ಶೀಘ್ರದಲ್ಲಿಯೇ ಆಶಾ ಕಾರ್ಯಕರ್ತರ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣಕ್ಕೆ ಈ ಬಾರಿ ಬಜೆಟ್ ನ ಶೇ.೧೧ ರಷ್ಟು ಹಣ ಮೀಸಲಿಡಲಾಗಿದೆ. ಇಂದಿರಾ ಕ್ಯಾಂಟಿನ್ ಪುನರಾರಂಭ ಮಾಡಲಾಗಿದೆ. ಆಹಾರ ಪೂರೈಸುವ ಜೊಮೆಟೋ, ಸ್ವಿಗ್ಗಿ ಕಾರ್ಮಿಕರಿಗೆ ಇನ್ಸೂರೆನ್ಸ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಮ ವಹಿಸಿದ್ದಾರೆ. ಕೃಷಿ ಭಾಗ್ಯ ಯೋಜನೆಗೆ ೧೦೦ ಕೋಟಿ ರೂ. ಹಣ ಮೀಸಲಿಟ್ಟಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ನಾನು ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯ ಅವಕಾಶ ನೀಡದ ಕಾರಣ ನಮ್ಮ ಮುಖಂಡರು ಹಾಗೂ ನನ್ನ ಪತ್ನಿ ಮುಂದಾಳತ್ವ ವಹಿಸಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರು ಚುನಾವಣೆ ಬರುತ್ತಿದ್ದಂತೆ ಹಲವು ರಸ್ತೆ ಅಭಿವೃದ್ಧಿಗಾಗಿ ೪೭೦೦ ಕೋಟಿ ರೂ. ಕಾಮಗಾರಿಗೆ ಭೂಮಿಪೂಜೆ ಮಾಡಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆ ಖಜಾನೆಯಲ್ಲಿ ಅಷ್ಟು ಹಣ ಇಲ್ಲದ ಕಾರಣ ಮುಖ್ಯಮಂತ್ರಿಗಳು ಕಾಮಗಾರಿ ತಡೆ ಹಿಡಿದಿದ್ದು, ಹಣ ಬಂದ ಮೇಲೆ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿದರು.
ಈಗಾಗಲೇ ಮುಂಗಾರು ವಿಳಂಬವಾಗಿದ್ದು, ಮುಂಗಾರು ಬೆಳೆಹಾನಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಜಮೀನಿನ ಅಭಾವಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಕ್ರಮ ವಹಿಸಲಾಗುವುದು. ಧಾರವಾಡ ಕೆಐಎಡಿಬಿಯಲ್ಲಿ ೨೩ ಕೋಟಿ ರೂ. ಹಗರಣ ನಡೆದಿದ್ದು, ವಿಚಾರಣೆ ನಡೆದಿದೆ. ಹಿಂದಿನ ಸರ್ಕಾರದಲ್ಲಿ ನಡೆದ ಹಲವು ಹಗರಣಗಳನ್ನು ತನಿಖೆ ಕೈಗೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.ಶಾಸಕ ಎನ್.ಎಚ್. ಕೋನರಡ್ಡಿ, ವಿಶ್ವಾಸ ವೈದ್ಯ ಮುಖಂಡರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡ್ರ ಇದ್ದರು.
ಜಿಲ್ಲೆ ಪ್ರವೇಶ ಕೋರಿ ನಾನು ಹೈಕೋರ್ಟ್ ಗೆ ಅಪೀಲ್ ಸಲ್ಲಿಸುತ್ತೇನೆ. ಜಿಲ್ಲೆ ಪ್ರವೇಶಕ್ಕೆ ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಯಾರೇ ಎಷ್ಟೇ ಷಡ್ಯಂತ್ರ ಮಾಡಿದರೂ ನನಗೆ ನ್ಯಾಯಾಲಯದ ಮೇಲೆ ಭರವಸೆ ಇದೆ.
ವಿನಯ ಕುಲಕರ್ಣಿ, ಶಾಸಕ