ವಿಜಯಪುರ: ಪ್ರಹ್ಲಾದ ಜೋಶಿ ಅವರೇ ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ಇವೆ. ಅವು ಶ್ರೀಮಂತರಿಗಲ್ಲ. ಸುಮ್ನೆ ಹೊಟ್ಟೆ ಉರಿಯಿಂದ ಏನೆನೋ ಮಾತನಾಡಬೇಡಿ, ಬಡವರ ಬಗ್ಗೆ ನಿಮಗೇನು ಗೊತ್ತು. ತಿಳಿದವರಿದ್ದೀರಿ, ಕೇಂದ್ರ ಸಚಿವರಿದ್ದೀರಿ ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ, ೨೦೦ ಯೂನಿಟ್ ವಿದ್ಯುತ್, ಬಸ್ ಫ್ರೀ, ಯುವ ನಿಧಿ ಶ್ರೀಮಂತರಿಗಾ? ತಿಳಿದುಕೊಂಡು ಮಾತನಾಡಿ ಎಂದು ಕಿಡಿಕಾರಿದರು.
ವಿರೋಧ ಪಕ್ಷದ ನಾಯಕನ್ನು ಬಿಜೆಪಿ ಇನ್ನೂ ಯಾಕೆ? ಆಯ್ಕೆ ಮಾಡಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಎಂ.ಬಿ.ಪಿ, ಈ ಹಿಂದೆ ಬಿಜೆಪಿಯವರೇ ಮುಖ್ಯಮಂತ್ರಿ ಪಟ್ಟಕ್ಕೆ ೨೫೦೦ ಕೋಟಿ ಎಂದು ಹೇಳುತ್ತಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ? ಯಾರಿಗೆ ಗೊತ್ತು. ಬಹುಃಶ ಅದಕ್ಕೆ ತಡವಾಗಿದೆ ಎನ್ನುವ ಮೂಲಕ ಯತ್ನಾಳ ಅವರನ್ನು ಪರೋಕ್ಷವಾಗಿ ಕಿಚಾಯಿಸಿದ್ದಾರೆ.