ಹುಬ್ಬಳ್ಳಿ: ಜೈನ ಮುನಿಗಳಿಗೆ ಭದ್ರತೆ ಮತ್ತು ಹಿರೇಕೋಡಿ ಕಾಮಕುಮಾರ ನಂದಿ ಸ್ವಾಮಿಗಳ ಹಂತಕರಿಗೆ ಶಿಕ್ಷೆ ಕೊಡಿಸುವ ಭರವಸೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ನೀಡಿದ್ದಾರೆ.
ಹತ್ಯೆ ಖಂಡಿಸಿ ವರೂರಿನ ಗುಣಧರ ನಂದಿ ಸ್ವಾಮೀಜಿ ಕೈಗೊಂಡಿದ್ದ ಸಲ್ಲೇಖನ ವೃತ ಮೊಟಕುಗೊಳಿಸುವಂತೆ ಮನವಿ ಮಾಡಿ ಅವರು ಮಾತನಾಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಮಕುಮಾರ ನಂದಿ ಸ್ವಾಮೀಜಿ ಹತ್ಯೆ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಯಾವೆಲ್ಲ ತನಿಖೆಯಾಗಬೇಕು ಅದು ಆಗುತ್ತದೆ. ಈ ಘಟನೆ ಯಾರ ವೈಫಲ್ಯದಿಂದಲೂ ಆಗಿಲ್ಲ. ಆದರೆ, ಇಂತಹ ಘಟನೆಗಳ ನಡೆಯದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಗುಣಧರನಂದಿ ಸ್ವಾಮೀಜಿ ಅಮರಣಾಂತ ಉಪವಾಸ ಕೈಗೊಂಡಿರುವುದು ಗಮನಕ್ಕೆ ಬಂದಿತ್ತು. ಬಹಳ ಪ್ರಾಮಾಣಿಕವಾಗಿ ತನಿಖೆ ಕೈಗೊಂಡಿರುವುದಾಗಿ ಕೂಡ ಹೇಳಿದ್ದೆ ಸ್ವಾಮೀಜಿಗೆ ಹೇಳಿದ್ದೇನೆ. ಭರವಸೆಯ ಬಳಿಕ ಸ್ವಾಮೀಜಿಗಳು ಉಪವಾಸ ಮೊಟಕುಗೊಳಿಸಿದ್ದಾರೆ. ಸ್ವಾಮೀಜಿಯವರ ಈ ನಿರ್ಧಾರಕ್ಕೆ ನಾನು ಅಭಾರಿಯಾಗಿದ್ದೇನೆ. ಎಡಿಜಿಪಿ ಸಹ ಚಿಕ್ಕೋಡಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನ ನನಗೆ ತಿಳಿಸಿದ್ದಾರೆ. ಸ್ವಾಮೀಜಿಗಳು ನನ್ನ ಮುಂದೆ ನಾಲ್ಕು ಬೇಡಿಕೆಗಳನ್ನ ಇಟ್ಟಿದ್ದಾರೆ. ಜೈನಮುನಿಗಳ ಪಾದಯಾತ್ರೆ ವೇಳೆ ರಕ್ಷಣೆ ನೀಡುವುದರ ಕುರಿತು ಬೇಡಿಕೆ ಇಟ್ಟಿದ್ದಾರೆ. ತಮ್ಮ ಪಾದಯಾತ್ರೆ ಕುರಿತು ಲಿಖಿತವಾಗಿ ನಮಗೆ ತಿಳಿಸಿದ ಕೂಡಲೇ ಆಯಾ ಜಿಲ್ಲೆಗಳಲ್ಲಿ ನಮ್ಮ ಇಲಾಖೆಯಿಂದ ಭದ್ರತೆ ಒದಗಿಸಲಾಗುವುದು. ಪಾದಯಾತ್ರೆ ಸಂದರ್ಭ ಆಯಾ ಜಿಲ್ಲೆಗಳಲ್ಲಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಸೂಕ್ತ ಆಶ್ರಯ ಒದಗಿಸುವಂತೆ ಶಿಕ್ಷಣ ಇಲಾಖೆಯ ಸಚಿವರಿಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಜೈನ ಸಮುದಾಯದ ಮಂಡಳಿ ಕುರಿತು ಸಿಎಂ ಗಮನಕ್ಕೆ ತರುತ್ತೇನೆ ಎಂದರು. ಬಜೆಟ್‌ಗಿಂತಲೂ ಮುಂಚೆಯಾಗಿದ್ದರೆ ಜೈನಮಂಡಳಿಗೆ ಹಣ ಮೀಸಲಿಡುವ ಕೆಲಸಗಳಾಗುತ್ತಿತ್ತು. ಈಗ ಈ ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಕರ್ನಾಟಕ ಶಾಂತಿಯ ತೋಟ ಎಂಬಂತೆ ನಾವು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇವೆ. ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.