ಹುಬ್ಬಳ್ಳಿ: ಚಿಕ್ಕೋಡಿಯ ಜೈನ್ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ. ಜೈನ್ ಮುನಿಗಳಿಗೆ ರಕ್ಷಣೆ ಕೋರಿ ಇಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜರು ಹೇಳಿದರು.
ಹುಬ್ಬಳ್ಳಿ ವರೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ್ ಮುನಿಗಳ ಸುರಕ್ಷತೆ ಬಗ್ಗೆ ಮುಖ್ಯಮಂತ್ರಿಗಳು ಅಥವಾ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡುವವರೆಗೆ ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.
ಜೈನ ಬಸದಿಗಳು, ಜೈನ ಮುನಿಗಳು, ಜೈನ ಸಮಾಜಕ್ಕೆ ಸುರಕ್ಷತೆ ಇಲ್ಲದಾಗಿದೆ. ಜೈನ ಮುನಿಗಳ ಹತ್ಯೆಯಾದರೂ ಸರಕಾರ ಇದುವರೆಗೂ ಗಮನಹರಿಸಿಲ್ಲ. ಅಲ್ಲಿನ ಶಾಸಕರು ಕೂಡ ಸ್ಪಂದಿಸಿಲ್ಲ ಎಂದರು. ಜೈನ್ ಮುನಿಗಳು ಗ್ರಾಮದ ಒಬ್ಬರ ಕಷ್ಟಕ್ಕೆ ಸಹಾಯ ಮಾಡಿ 6 ಲಕ್ಷರೂಪಾಯಿ ನೀಡಿದ್ದಾರೆ. ಈ ಹಣವನ್ನು ವಾಪಸ್ ಕೇಳಿದಕ್ಕೆ ಕರೆಂಟ್ ಶಾಕ್ ನೀಡಿ, ತುಂಡು ತುಂಡಾಗಿ ದೇಹ ಬೇರ್ಪಡಿಸಿ, ಏಳುನೂರು ಅಡಿ ಕೊಳವೆ ಬಾವಿಯಲ್ಲಿ ದೇಹ ಹಾಕಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು ಬಹಳಷ್ಟು ಕ್ರೂರವಾದದ್ದು, ಸಮಾಜಕ್ಕೆ ಒಳ್ಳೆಯದನ್ನು ಬಯಸುವುದು ತಪ್ಪಾ ಎಂದು ಕಣ್ಣೀರಾದರು. ಹೀಗಾಗಿ ಸರಕಾರ ಕೂಡಲೇ ಜೈನ ಮುನಿಗಳಿಗೆ ಸುರಕ್ಷತೆಗೆ ಕ್ರಮ ಕೈಗೊಂಡು ಲಿಖಿತವಾಗಿ ನೀಡಬೇಕು. ಅಲ್ಲಿಯವರೆಗೂ ಅಮರಣ ಉಪವಾಸ ಕೈ ಬಿಡುವುದಿಲ್ಲ ಎಂದು ಹೇಳಿದರು.