ಜುಲೈ 5ರಿಂದ ವಿಧಾನಸೌಧದ ಮುಂದೆ ಧರಣಿ

0
25

ದಾವಣಗೆರೆ : ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಕೊಟ್ಟ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದರೂ ಇನ್ನೂ ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿಗಳನ್ನು ಕೊಡಬೇಕು ಎಂದು ಜುಲೈ 5ರಿಂದ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಧರಣಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
ನಗರದ ರೇಣುಕಾ ಮಂದಿರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜುಲೈ 4ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣದ ನಂತರ ದಿನವಾದ ಜುಲೈ 5ರಂದು ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಐದು ಗ್ಯಾರಂಟಿಗಳನ್ನು ಈಡೇರಿಸುವಂತೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ನಾನೆ ಖುದ್ದಾಗಿ ಈ ಧರಣಿ ನಡೆಸಲಿದ್ದು ನನ್ನೊಂದಿಗೆ ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಇನ್ನೂ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ನಮ್ಮ ಪಕ್ಷದ ಶಾಸಕರು ಹೋರಾಟ ಮಾಡಲಿದ್ದಾರೆ. ಈ ವಿಚಾರವಾಗಿ ಸದಸದ ಹೊರಗು ಮತ್ತು ಒಳಗೂ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳಾದ ಅಕ್ಕಿ ಭಾಗ್ಯ, ಗೃಹಲಕ್ಷಿö್ಮ, ಗೃಹ ಜ್ಯೋತಿ, ಶಕ್ತಿ ಯೋಜನೆ ಹಾಗೂ ಪದವೀಧರರಿಗೆ ಮೂರು ಸಾವಿರ ರೂಪಾಯಿ, ಡಿಪ್ಲೊಮೋ ಪದವೀಧರರಿಗೆ ವಿದ್ಯಾನಿಧಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಕಾರ್ಡ್ಗಳ ಮೇಲೆ ಸಹಿ ಮಾಡಿ ಜನರಿಗೆ ಆಶ್ವಾಸ ನೀಡಿದ್ದರು. ಅದರಲ್ಲಿ ಒಂದು ಶಕ್ತಿ ಯೋಜನೆ ಜಾರಿಗೆ ತಂದಿದ್ದಾರೆ. ಉಳಿದ ಗ್ಯಾರಂಟಿಗಳನ್ನು ಸರ್ಕಾರ ನೀಡಬೇಕು. ಇಲ್ಲದಿದ್ದರೆ ನಾವುಗಳು ಸಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕುಟುಂಬದ ಓರ್ವ ಸದಸ್ಯನಿಗೆ 10 ಕೆ.ಜಿ. ಅಕ್ಕಿ ಕೂಡುವುದಾಗಿ ಹೇಳಲಾಗಿತ್ತು. ಕೇಂದ್ರದ ಮೋದಿ ಸರ್ಕಾರ ಐದು ಕೆ.ಜಿ. ಅಕ್ಕಿ ಕೊಡುತ್ತಿದೆ. ಅದರೊಂದಿಗೆ ಈ ಸರ್ಕಾರ 10 ಕೆ.ಜಿ. ಸೇರಿದಂತೆ ಒಟ್ಟು 15 ಕೆ.ಜಿ. ಅಕ್ಕಿ ಕೊಡಲೇ ಬೇಕಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಜನರಿಗೆ ಅಕ್ಕಿ ಕೊಡುವ ಬದಲು ವಿನಾಕಾರಣ ಸಬೂಬು ಹೇಳುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಅಕ್ಷಮ್ಯ ಅಪರಾಧ. ಕೊಟ್ಟ ಭರವಸೆ ಮೊದಲು ಈಡೇರಿಸಿ, ಅದನ್ನು ಬಿಟ್ಟು ಆರೋಪ ಮಾಡುತ್ತಾ ಕೂರುವುದು ಸರಿಯಲ್ಲ ಎಂದರು.

ವಿಶ್ವಾಸಕ್ಕೆ ದ್ರೋಹ ಬಗೆಯಬಾರದು: ಸರ್ಕಾರ ಬಂದು 24 ಗಂಟೆಯೊಳಗೆ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಇದುವರೆವಿಗೂ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿಲ್ಲ. ನೀವು ಕೊಟ್ಟಂತಹ ಭರವಸೆಗಳ ಮೇಲೆ ಜನರು ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದು, ನೀವು ದ್ರೋಹ ಬಗೆಯಬಾರದು.

ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

Previous articleಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರ ಸನ್ನದು ಶಾಶ್ವತ ರದ್ದು
Next articleನಿಯಂತ್ರಣ ತಪ್ಪಿ ಉರುಳಿದ ಬಸ್: 30 ಜನರಿಗೆ ಗಾಯ