ಶಿಗ್ಗಾವಿ: ತಾಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಬಾಸ್ಕರ್ ಅವರಿಗೆ ಸೈಬರ್ ಖದೀಮರು 60 ಸಾವಿರ ರೂ. ಟೋಪಿ ಹಾಕಿದ್ದು, ಸೈಬರ್ ಕ್ರೈಂ ಖದೀಮರು ಎಂತಹ ವಿದ್ಯಾವಂತರನ್ನು ವಂಚಿಸಬಲ್ಲರು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.
ಪ್ರಕರಣದ ಕುರಿತು ಸ್ವತಃ ಡಾ. ಟಿ.ಎಂ. ಬಾಸ್ಕರ್ ಅವರೇ ಶಿಗ್ಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಧ್ಯಾಹ್ನದ ಸಮಯದಲ್ಲಿ ನನಗೆ ಫೋನ್ ಮಾಡಿದ ವ್ಯಕ್ತಿ ಧಾರವಾಡ ಎಸ್‌ಬಿಐ ಬ್ಯಾಂಕ್‌ನ ನವೀಕುಮಾರ ಎಂದು ಹೇಳಿಕೊಂಡು ‘ನಿಮ್ಮ ಫೋನ್ ಪೇಗೆ ಒಂದು ದಿನದ ಟ್ರಾಂಜಾಕ್ಷನ್ ಲಿಮಿಟೇಶನ್ 60 ಸಾವಿರ ರೂ. ಇದ್ದು, ಇದನ್ನು ಮುಂದುವರಿಸಲು ನಾವು ನಿಮ್ಮ ಫೋನ್‌ಗೆ ಲಿಂಕ್ ಕಳುಹಿಸುತ್ತೇನೆ. ಅದಕ್ಕೆ ನೀವು ಎಸ್ ಎಂದು ತಿಳಿಸಿದರೆ ಈ ಸೇವೆ ಮುಂದುವರಿಯುತ್ತದೆ. ಅಲ್ಲದೆ ಈ ಸೇವೆಯನ್ನು ನಿಮ್ಮ ಸ್ನೇಹಿತರಾದ ಅನಸೂಯಾ ಕಾಂಬಳೆ, ಕೃಷ್ಣ ನಾಯಕ, ರಾಜೇಂದ್ರ ನಾಯಕ ಅವರಿಗೆ ಕಳುಹಿಸಿದ್ದೇವೆ’ ಎಂದು ತಿಳಿಸಿದರು.
ಇದು ಸತ್ಯ ಇರಬಹುದು ಎಂದುಕೊಂಡ ನಾನು ಸೇವೆ ಮುಂದುವರಿಸಲು ಅವರೊಂದಿಗೆ ಮಾತನಾಡಿ, ನನ್ನ ಫೋನ್ ಪೇ ಪಾಸ್‌ವರ್ಡ್ ಹಾಕಿದೆ. ಆಗ 60 ಸಾವಿರ ರೂ. ಏಕಾಏಕಿ ನನ್ನಿಂದ ವರ್ಗಾವಣೆಯಾಗಿರುವ ಕುರಿತು ಎಸ್‌ಎಂಎಸ್ ಬಂದಿತು. ಆ ಮೇಲೆ ಫೋನ್ ಮಾಡಿದರೆ ಅವರು ಫೋನ್ ಕಟ್ ಮಾಡಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.