ಜಾತಿ ‘ಸಿಎಂ’ ಪ್ರಜಾಪ್ರಭುತ್ವದ ಅಣಕ ಮಾಜಿ ಸಿಎಂ ಎಸ್.ಎಂ.ಕೃಷ್ಣ

0
35

ಮಂಡ್ಯ : ಜಾತಿ ಆಧಾರದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶುಕ್ರವಾರ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಬಳಿ ಖಾಸಗಿ ಹೋಟೆಲ್ ನಲ್ಲಿ ಮುಖಂಡರು ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಯೋಗ್ಯತೆ, ಸಾಧನೆ, ಸಾಮಾಜಿಕ ಕಳಕಳಿ ಹೊಂದಿರುವಂತ ಹಾಗೂ ನ್ಯಾಯ ಸಮ್ಮತ ಮನೋಭಾವ ಹೊಂದಿರುವಂತ ರಾಜ್ಯದ ಮುಖ್ಯಮಂತ್ರಿಯಾಗಬೇಕೆ ಹೊರತು ಜಾತಿ ಆಧಾರದ ಮೇಲೆ ಆಯ್ಕೆ ಮಾಡುವುದು ಸರಿಯಲ್ಲ ಎಂದರು.
ರಾಜಕೀಯ ತನ್ನದೇ ಆದ ಕಾಲಘಟ್ಟದಲ್ಲಿ ಒಂದೊಂದು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ದೊಡ್ಡ ಮಾರಕವಾಗಿದೆ. ಎಲ್ಲಿಯವರೆಗೆ ಕೊಡುವವರು ಮತ್ತು ತೆಗೆದುಕೊಳ್ಳುವವರ ಮಧ್ಯೆ ಅಂತಃಕರಣ ಶುದ್ಧಿಯಿಂದ ಕಾಲನ್ನು ಇಡುತ್ತದೋ ಆದರ ಆಧಾರದ ಮೇಲೆ ಪ್ರಜಾಪ್ರಭುತ್ವ ನಿಲ್ಲುತ್ತದೆ ಎಂದು ಹೇಳಿದರು.
ನಾನೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕಾಲಘಟ್ಟಕ್ಕೆ ತಲುಪುವುದೇ ಅನಾರೋಗ್ಯಕರವಾದದ್ದು, ಪ್ರಶ್ನೆಯೇ ಇಲ್ಲಿ ಉದ್ಭವಿಸಬೇಕಾಗಿರಲಿಲ್ಲ. ಇತಿ ಮಿತಿ ಗಮನದಲ್ಲಿಟ್ಟುಕೊಂಡು ಮುಂದುವರೆದರೆ ಈ ದ್ವಂದ್ವಕ್ಕೆ ಪರಿಹಾರ ಸಿಗಬಹುದು ಎಂದು ಕಿವಿ ಮಾತು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಗೆ ತಮ್ಮ ಕುಟುಂಬದಿಂದ ಯಾರು ಸಹ ಸ್ಪರ್ಧೆ ಮಾಡುವುದಿಲ್ಲ. ನನ್ನ ಮಕ್ಕಳು ಅವರದೇ ಆದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ನಾನು ಬಲವಂತವಾಗಿ ರಾಜಕೀಯಕ್ಕೆ ಧುಮುಕಿ ಅಂತ ಹೇಳುವುದು ಸರಿಯಲ್ಲ. ರಾಜಕೀಯಕ್ಕೆ ಬರುವ ಇಚ್ಚಾಶಕ್ತಿ ಅವರಲ್ಲೆ ಬರಬೇಕು. ಈಗಾಗಲೇ ನಾನು ರಾಜಕೀಯದಿಂದ
ಸಂಪೂರ್ಣವಾಗಿ ನಿವೃತ್ತಿಯಾಗಿರುವುದರಿಂದ ಯಾವುದೇ ಪಕ್ಷದಿಂದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲ್ಲ. ಆ ಬಗ್ಗೆ ನನಗೆ ಆಸಕ್ತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಯಬೇಕಾದರೇ ನಾಲ್ಕು ರಾಜ್ಯಗಳ ರೈತ ಮುಖಂಡರು ಒಟ್ಟಿಗೆ ಸಭೆ ಸೇರಿ ಚರ್ಚಿಸಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರಕಬಹುದೆನೋ. ಪ್ರಸ್ತುತ ರಾಜ್ಯ ಸರ್ಕಾರ ಅನಿವಾರ್ಯ ಹಾಗೂ ವಿಧಿ ಇಲ್ಲದೆ ತಮಿಳುನಾಡಿಗೆ ನೀರು ಬಿಡಬೇಕಾದ ಆದೇಶವನ್ನು ಅನುಸರಿಸಬೇಕಿದೆ ಎಂದರು.
ರಾಜಕೀಯದಿಂದ ನಿವೃತ್ತಿಯಾದ ನಂತರ ನನ್ನ ಜೀವನದಲ್ಲಿ ಮನಸ್ಸು ನಿರಾಳವಾಗಿದೆ. ಯಾವುದೇ ಒತ್ತಡಗಳಿಲ್ಲ‌. ಪತ್ರಿಕೆ, ಪುಸ್ತಕ ಓದುವುದು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ದಿ ಸ್ವಾರಸ್ಯಗಳನ್ನು ನೋಡುವ ಮೂಲಕ ನೆಮ್ಮದಿಯಾಗಿ ಕಾಲಕಳೆಯುತ್ತ ರಾಜಕೀಯ ಜಂಜಾಟದಿಂದ ದೂರವಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮುಖಂಡರಾದ ಕೆ.ಆರ್.ಮಹೇಶ್, ನಾಗರಾಜು, ಸಿ.ನಾಗೇಗೌಡ, ವಿಜಯ್, ಶಿವಲಿಂಗಯ್ಯ, ತಮ್ಮಣ್ಣ ಇದ್ದರು.

Previous articleಕರ್ನಾಟಕವೇ ಒಂದು ಅನುಭವ ಮಂಟಪ
Next articleಬಿಜೆಪಿ ಮೊದಲು ಶಾಸಕಾಂಗ ನಾಯಕ ಆಯ್ಕೆ ಮಾಡಲಿ