ಜಾತಿ ನೋಡಿ ಟಿಕೆಟ್ ನೀಡಿದ್ದಲ್ಲ

ರಘುಪತಿ ಭಟ್

ಉಡುಪಿ: `ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ನನಗೆ ಟಿಕೆಟ್ ನೀಡಿದ್ದಲ್ಲ. ನನ್ನ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಿಂದಾಗಿ ನನ್ನನ್ನು ಪಕ್ಷ ಈ ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಯನ್ನಾಗಿಸಿದ್ದು, ಈ ಬಾರಿಯೂ ಟಿಕೆಟ್ ಲಭಿಸುವ ಸಾಧ್ಯತೆ ಇದೆ’ ಎಂದು ಹಾಲಿ ಶಾಸಕ, ಉಡುಪಿ ವಿಧಾನಸಭಾ ಕ್ಷೇತ್ರದ ಸಂಭವನೀಯ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು, ಆ ಕ್ಷೇತ್ರಕ್ಕೆ ಕಿರಣ್ ಕೊಡ್ಗಿ ಅವರನ್ನು ಕಣಕ್ಕಿಳಿಸಿದಲ್ಲಿ ಸಂತೋಷ ಎಂದು ಹೇಳಿದ್ದಾರೆ. ಆದರೂ ಪಕ್ಷ ಅಲ್ಲಿನ ಅಭ್ಯರ್ಥಿ ಆಯ್ಕೆ ಮಾಡಲಿದೆ.
ನಾನು ಕುಂದಾಪುರ ಕ್ಷೇತ್ರದ ಆಕಾಂಕ್ಷಿ ಅಲ್ಲ, ಉಡುಪಿಯಲ್ಲಿ ಸ್ಪರ್ಧೆ ಮಾಡಲಿಚ್ಛಿಸುತ್ತಿದ್ದೇನೆ. ಒಂದು ವೇಳೆ ಕೊಡ್ಗಿ ಅವರಿಗೆ ಟಿಕೆಟ್ ನೀಡಿದರೂ ತನಗೆ ಟಿಕೆಟ್ ತಪ್ಪಿ ಹೋಗದು. ಜಾತಿ ಆಧಾರದಲ್ಲಿ ಟಿಕೆಟ್ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಅಭಿವೃದ್ಧಿ ಆಧಾರದಲ್ಲಿ, ಗೆಲುವು ಸಾಧಿಸಬಲ್ಲ ವ್ಯಕ್ತಿಗೆ ಟಿಕೆಟ್ ನೀಡುವುದು ನಮ್ಮ ಸಂಪ್ರದಾಯ ಎಂದರು.
ನನಗೆ 2004ರಿಂದ ಬ್ರಾಹ್ಮಣ ಎಂಬ ಕಾರಣಕ್ಕೆ ಟಿಕೆಟ್ ನೀಡಿಲ್ಲ. ಜಾತಿಯಲ್ಲಿ ನಾನು ಬ್ರಾಹ್ಮಣ ಇರಬಹುದು, ಆದರೆ ನನಗೆ ಸೀಟು ಸಿಗುತ್ತಿರುವುದು ಉತ್ತಮ ಕಾರ್ಯಕರ್ತ ಎನ್ನುವ ನೆಲೆಯಲ್ಲಿ, ಉತ್ತಮ ಕಾರ್ಯನಿರ್ವಹಣೆ ನೆಲೆಯಲ್ಲಿ. ಆದ್ದರಿಂದ ಯಾವುದೇ ಮಾನದಂಡಗಳು ಬಂದರೂ ನನ್ನ ಟಿಕೆಟ್‌ಗೆ ಅಡ್ಡಿಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.