ಬಳ್ಳಾರಿ: ಹೆಲಿಕಾಪ್ಟರ್ ನಲ್ಲಿ ಹಾರಾಡೋರು ರಸ್ತೆ ಮಾಡಲು ಆಗದು, ಬ್ಲಾಕ್ ಮೇಲ್ ರಾಜಕಾರಣ ಮಾಡೋರು ಏನು ಬೇಕಿದ್ದರೂ ಸುಳ್ಳು ಹೇಳಬಹುದು ಎಂದು ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಜನಾರ್ದನ್ ರೆಡ್ಡಿ ಸಹೋದರ ಜಿ.ಸೋಮಶೇಖರ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ವಿನಾ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸೋಮಶೇಖರ್ ರೆಡ್ಡಿ ಕೊನೆಯ ಗಳಿಗೆಯಲ್ಲಿ ಕೆ ಆರ್ ಪಿಪಿ ಕಡೆ ಹೋಗುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ ಎಂದರು.
ನಾನು ಕೊನೆಯ ಉಸಿರು ಇರುವ ತನಕ ಭಾರತೀಯ ಜನತಾ ಪಾರ್ಟಿಯಲ್ಲಿ ಇರುವೆ. ನಾನು ಸತ್ತ ಮೇಲೂ ನನ್ನ ಮೇಲೆ ಬಿಜೆಪಿ ಬಾವುಟ ಹಾಕಿ ಸುಡಬೇಕು ಎಂದು ಹೇಳಿದ್ದೇನೆ. ಪಕ್ಷಕ್ಕೆ ದ್ರೋಹ ಮಾಡುವ ಉದ್ದೇಶ ಇಲ್ಲ ಎಂದು ಅವರು ತಿಳಿಸಿದರು.
ಕೆ ಆರ್ ಪಿ ಪಿ ಅವರು ಅಬ್ಬರ ಮಾಡುತ್ತಿದ್ದಾರೆ. ಹಣ ಇದೆ ಎಂದು ಅವರು ಅಬ್ಬರ ಮಾಡುತ್ತಿದ್ದಾರೆ. ಪಾಲಿಕೆ ಸದಸ್ಯರನ್ನು ಸೆಳೆಯುತ್ತಿದ್ದಾರೆ. ಜನಾರ್ದನ್ ರೆಡ್ಡಿ ಬೆದರಿಸುತ್ತಿದ್ದಾರೆ. ಆಸ್ತಿ ಬರೆಯಿಸಿಕೊಂಡು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಯೇಚರೆಡ್ಡಿ ಸತೀಶ್, ಮುಖಂಡರಾದ ಕೆಎಂ ಮಹೇಶ್ವರ ಸ್ವಾಮಿ, ವಿಭೂತಿ ಯರಿಸ್ವಾಮಿ,ರಾಜೀವ್ ತೊಗರಿ, ಅನಿಲ್ ನಾಯ್ಡು ಇದ್ದರು.