ಧಾರವಾಡ: ‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೌಶಲ ಮತ್ತು ಪ್ರತಿಭೆಯ ಕೊರತೆ ಇದೆ. ಹೀಗಾಗಿ ಅಂಥ ರಾಷ್ಟ್ರಗಳು ಜಗತ್ತಿನಲ್ಲಿ ಶಿಕ್ಷಣ, ಪ್ರತಿಭೆ, ನಾವೀನ್ಯತೆ ಇರುವ ಕಡೆ ನೋಡುತ್ತಿವೆ. ಇದಕ್ಕೆ ಪೂರಕವಾಗಿ ಚೀನಾ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನ ಲಾಭ ಭಾರತದಂತ ಪ್ರತಿಭಾವಂತ ರಾಷ್ಟ್ರಕ್ಕೆ ಆಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ರಂಗಗಳ ತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಎಂಬುದು ಇಡೀ ಜಗತ್ತನ್ನೇ ಆಳುತ್ತಿದೆ. ಪ್ರತಿಭೆ ಮತ್ತು ನಾವೀನ್ಯತೆಯನ್ನೇ ಬಯಸುವ ಈ ಕ್ಷೇತ್ರವು ಭಾರತದಲ್ಲಿರುವ ಇಂಥ ಮಾನವ ಸಂಪನ್ಮೂಲದತ್ತ ಕಣ್ಣಿಟ್ಟಿದೆ. ಇದರ ಲಾಭ ದೇಶದ ಜನರಿಗೆ ಆಗಲಿದೆ ಎಂದರು.
ಬದಲಾವಣೆಯ ಕಾಲಘಟ್ಟದಲ್ಲಿಂದು ಭಾರತ ಇದೆ. ತನ್ನ ದೇಶ ಹಾಗೂ ಪ್ರಜೆಗಳ ಹಿತದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ವಿದೇಶಾಂಗ ನೀತಿಯಲ್ಲಿ ದೇಶ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಕೆಲವರ ಪರವಾಗಿರದೆ, ದೇಶದ ಪ್ರತಿ ಪ್ರಜೆಯ ಹಿತ ಕಾಯುವುದಾಗಿದೆ. ಆದರೆ ಕೆಲ ನಿರ್ಧಾರದ ಕುರಿತು ಪ್ರಜೆಗಳು ಅಸಂತುಷ್ಟರಾದರೆ ಅವುಗಳಿಂದ ಹಿಂದೆ ಸರಿಯಲಾಗುತ್ತಿದೆ. ಇನ್ನೂ ಕೆಲವು ದೇಶದ ಭದ್ರತೆಯ ದೃಷ್ಟಿಯಿಂದ ಗೋಪ್ಯವಾಗಿಡಲಾಗುತ್ತದೆ. ಆದರೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳ ಹಿಂದೆ ದೇಶದ ಹಿತವಲ್ಲದೆ ಬೇರೇನೂ ಇಲ್ಲ’ ಎಂದರು.