ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದಿದೆ. ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಸಿಕ್ಕಂತಹ 2ನೇ ಚಿನ್ನದ ಪದಕ ಇದಾಗಿದ್ದು. ಇದಕ್ಕೂ ಮುನ್ನ 10 ಮೀಟರ್ ಏರ್ ರೈಫಲ್ ಪುರುಷರ ತಂಡದ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಸಿಕ್ಕಿತ್ತು. ರುದ್ರಾಂಕ್ ಪಾಟೀಲ್, ದಿವ್ಯಾನ್ಶ್ ಪನ್ವಾರ್ ಹಾಗೂ ಐಶ್ವರಿ ಪ್ರತಾಪ್ ತೋಮರ್ ಒಳಗೊಂಡ ರೈಫಲ್ ತಂಡ ಚಿನ್ನ ಗೆದ್ದಿತ್ತು.
ಚೀನಾದ ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿತು. ಬಳಿಕ 117 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 97 ರನ್ ಮಾತ್ರ ಗಳಿಸಿತು. ಅಂತಿಮವಾಗಿ ಭಾರತ ತಂಡ 19 ರನ್‌ಗಳ ಜಯ ಸಾಧಿಸುವ ಮೂಲಕ ಸ್ವರ್ಣ ಪದಕಕ್ಕೆ ಮುತ್ತಿಟ್ಟಿತು.
