`ಗ್ಯಾರಂಟಿ ಯೋಜನೆ’ ಜಾರಿಯಾಗದಿದ್ದರೆ ರಾಜೀನಾಮೆ

ಹುಬ್ಬಳ್ಳಿ: ಚುನಾವಣೆ ಸಂದರ್ಭದಲ್ಲಿ ಘೋಷಿಸಿರುವ ೫ ಗ್ಯಾರಂಟಿ ಯೋಜನೆಗಳನ್ನು ನಮ್ಮ ಕಾಂಗ್ರೆಸ್ ಸರಕಾರವು ಶೀಘ್ರ ಜಾರಿ ಮಾಡಲಿದೆ. ಒಂದು ವೇಳೆ ಜಾರಿ ಮಾಡದೇ ಇದ್ದರೆ ರಾಜೀನಾಮೆ ನೀಡುತ್ತೇನೆ ಎಂದು ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ನಮ್ಮ ಪಕ್ಷದ ನಾಯಕರು ನೀಡಿದ ಗ್ಯಾರಂಟಿ ಯೋಜನೆಗಳು ಖಂಡಿತ ಅನುಷ್ಠಾನ ಆಗಲಿವೆ ಎಂಬ ಭರವಸೆ ಇದೆ. ಯಾವುದೇ ಮಹತ್ವದ ಯೋಜನೆ ಜಾರಿಗೊಳಿಸಬೇಕಾದರೆ ಆಡಳಿತಾತ್ಮಕ ದೃಷ್ಟಿಯಿಂದ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ. ಒಂದು ವೇಳೆ ಗ್ಯಾರಂಟಿ ಯೋಜನೆ ಜಾರಿ ಮಾಡದೇ ಇದ್ದರೆ ರಾಜೀನಾಮೆ ನೀಡುತ್ತೇನೆ. ಇದರಲ್ಲಿ ಯಾವುದೇ ರೀತಿ ಹಿಂಜರಿಕೆ ಇಲ್ಲ ಎಂದು ಕೋನರಡ್ಡಿ ಸ್ಪಷ್ಟಪಡಿಸಿದರು.
ಶಾಸಕರಾದವರಿಗೆ ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂಬ ಹಲವು ಕನಸು ಇದ್ದೇ ಇರುತ್ತವೆ. ಒಂದು ವೇಳೆ ಹೊಸಬರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ನಿರ್ಧಾರ ಮಾಡಿದರೆ ಅದರಲ್ಲಿ ನನ್ನ ಹೆಸರು ಪರಿಗಣಿಸಬೇಕು. ಕೃಷಿ ಸಚಿವ ಸ್ಥಾನವನ್ನೇ ಕೊಡಿ ಎಂದು ಪಕ್ಷದ ವರಿಷ್ಠರಿಗೆ, ರಾಜ್ಯ ನಾಯಕರಿಗೆ ಮನವಿ ಮಾಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಹಿರಿಯರಾದ ಸಂತೋಷ ಲಾಡ್, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ ಅವರು ಇದ್ದಾರೆ. ಅವರಲ್ಲಿ ಯಾರೇ ಸಚಿವರಾದರೂ ನಾನೇ ಸಚಿವನಾದಂತೆಯೇ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಚಿವ ಸ್ಥಾನ ಕೊಟ್ಟರೆ ಏನೂ ತಪ್ಪಿಲ್ಲ. ಜಗದೀಶ್ ಶೆಟ್ಟರ್ ಅವರಿಗೆ ಸರಿ ಸಮಾನವಾಗಿರುವ ಹುದ್ದೆ ನೀಡುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳಸಾ ಬಂಡೂರಿ ನಾಲಾ ಯೋಜನೆಗೆ ಹಿಂದಿನ ಸರ್ಕಾರವು ಕಾಮಗಾರಿ ಟೆಂಡರ್ ಕರೆದಿಲ್ಲ. ಬರೀ ಹೇಳಿಕೆ ನೀಡಿಕೊಂಡು ಬಂದಿದೆ. ಅರಣ್ಯ ಇಲಾಖೆಯ ಒಪ್ಪಿಗೆಯೂ ಸಿಕ್ಕಿರಲಿಲ್ಲ. ನಮ್ಮ ಸರ್ಕಾರವು ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಲಿದೆ ಎಂದರು.