ಗ್ಯಾರಂಟಿಗಳಿಗೆ ಎಲ್ಲಿಂದ ಹಣ ತರುತ್ತಾರೆ?

0
15
ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ಮಾಡಲು ಹೊರಟಿರುವ ಐದು ಗ್ಯಾರಂಟಿಗಳಿಗೆ ಹಣಕಾಸಿನ ನಿರ್ವಹಣೆ ಬಗ್ಗೆ ಹೇಳುತ್ತಿಲ್ಲ, ಬದಲಾಗಿ ಮುಖ್ಯಮಂತ್ರಿಗಳು ಉಡಾಪೆ ಉತ್ತರ ನೀಡುತ್ತಿದ್ದು, ಕೂಡಲೇ ಐದು ಗ್ಯಾರಂಟಿಗಳಿಗೆ ಎಲ್ಲಿಂದ ಹಣ ತರುತ್ತಾರೆ? ಎಷ್ಟು ಹಣ ಖರ್ಚಾಗುತ್ತದೆ ಎಂಬ ಮಾಹಿತಿಯನ್ನು ಸರ್ಕಾರ ರಾಜ್ಯದ ಜನತೆಗೆ ತಿಳಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹ ಪಡಿಸಿದರು.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆ ಕುರಿತು ಓರ್ವ ಸಾಮಾನ್ಯ ಜನರು ಪ್ರಶ್ನೆ ಮಾಡುವ ಅಧಿಕಾರವಿದೆ. ಅದಾಗ್ಯೂ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಿಗೆ ಎಲ್ಲಿಂದ ಹಣ ತರುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಮ‌ೂಲಕ ಹಣಕಾಸಿನ ವಿಷಯವನ್ನು ಮರೆಮಾಚಿ ಜನರನ್ನು ಕತ್ತಲಲ್ಲಿ ಇಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಒಂದು ಕೈಯಲ್ಲಿ ಉಚಿತವಾಗಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವುದು ಮಾಡಬಾರದು. ಈಗಾಗಲೇ ಉಚಿತ ವಿದ್ಯುತ್ ಕುರಿತು ರಾಜ್ಯದ ಜನರಲ್ಲಿ ಗೊಂದಲ ಏರ್ಪಟ್ಟಿದೆ.‌ ಹೆಚ್ಚಿನ ಬಿಲ್ ಬರುತ್ತಿವೆ. ಇದಕ್ಕೆ ಜನ ಸಾಮಾನ್ಯರು ಸೇರಿದಂತೆ ಕೈಗಾರಿಕೆಗಳು ಬಾರಿ ವಿರೋಧ ಮಾಡುತ್ತಿವೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರ ವಿದ್ಯುತ್ ಬಿಲ್ ಹೆಚ್ಚಿಗೆ ಮಾಡಿದೆ ಎಂಬ ಮಾತನ್ನು ಹೇಳಿದ್ದಾರೆ. ಅದು ಶುದ್ದ ಸುಳ್ಳು, ಕೆಇಆರ್ ಸಿ ನೀಡಿದ ಪ್ರೋಪೋಸಲ್ ಅನ್ನು ನಮ್ಮ ಸರ್ಕಾರ ಒಪ್ಪಲಿಲ್ಲ. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅದನ್ನು ಒಪ್ಪಿ ವಿದ್ಯುತ್ ಬಿಲ್ ಹೆಚ್ಚಿಗೆಗೊಳಿಸಿದೆ ಎಂದು ಸ್ಪಷ್ಟನೆ ನೀಡಿದರು.
ಮೊದಲೇ ರಾಜ್ಯದಲ್ಲಿ ಹೆಸ್ಕಾಂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಹೀಗಿರುವಾಗ ಸರ್ಕಾರ ಉಚಿತ ವಿದ್ಯುತ್ ‘ನ ಹಣವನ್ನು ಮುಂಚಿತವಾಗಿ ಇಲಾಖೆಗೆ ನೀಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಕತ್ತಲಲ್ಲಿ ಇರಬೇಕಾದ ದಿನಗಳು ದೂರವಿಲ್ಲ. ಹೀಗಾಗಿ ದೂರದೃಷ್ಟಿ ಸರ್ಕಾರ ಈಗಾಗಲೇ ಮುಂದಾಗುವ ಅನಾಹುತ ಮನಗಂಡು ಅಗತ್ಯ ಸಿದ್ದತೆ ಮಾಡಬೇಕು. ಕೇವಲ ಗ್ಯಾರಂಟಿಗಳನ್ನು ಕೊಡೋದರಲ್ಲಿ ಸಮಯ ಹಾಳು ಮಾಡದೇ ಜನರಿಗೆ ಉಳಿದ ಅಭಿವೃದ್ಧಿ ಕೆಲಸ ಮಾಡಿಕೊಡಬೇಕು ಎಂದರು.
ಮಳೆಗಾಲದ ಸಿದ್ದತೆ ನಡೆಸಬೇಕು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಆಗತ್ತಾ ಬಂತು. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬಂದಿದೆ. ಮಾನ್ಸೂನ್ ತಡವಾಗಿದೆ, ಇದರಿಂದ ಬಿತ್ತನೆ ಕಾರ್ಯ ಕೂಡ ತಡವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯದ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ನದಿಗಳನ್ನು ನಂಬಿರುವ ನಗರಗಳು ಕುಡಿಯುವ ನೀರಿನ ಸಮಸ್ಯೆಯಲ್ಲಿವೆ. ಹೀಗಾಗಿ ಸರ್ಕಾರ ಕನ್ಸಟೆನ್ಸ್ ಯೋಜನೆ ಜಾರಿ ಮಾಡಬೇಕು. ಕೂಡಲೇ ರಾಜ್ಯ ಸರ್ಕಾರ ಜಿಲ್ಲಾ ಮಟ್ಟದಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡದೇ, ತಾಲೂಕು ಮಟ್ಟದಲ್ಲಿ ಪರಿಸ್ಥಿತಿ ನೋಡಿಕೊಂಡು ಟಾಸ್ಕ್ ಫೋರ್ಸ್ ಮಾಡಬೇಕು. ಸ್ಥಳೀಯ ಶಾಸಕರು, ಅಧಿಕಾರು ಸಭೆ ಮಾಡಿ ಕ್ರೀಯಾ ಯೋಜನೆ ತಯಾರು ಮಾಡಬೇಕು. ಇದಕ್ಕೆ ಸರ್ಕಾರ ಪ್ರತಿ ತಾಲೂಕಿಗೆ ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಬೇಕು.‌ ಇದನ್ನು ಮಾಡದೇ ಹೋದರೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಏರ್ಪಡಲಿದೆ. ಹೀಗಾಗಿ ಯುದ್ದೋಪಾದಿಯಲ್ಲಿ ಸರ್ಕಾರ ಮಳೆಗಾಲಕ್ಕೆ ಸಿದ್ದತೆ ಮಾಡಬೇಕೆಂದು ಒತ್ತಾಯಿಸಿದರು.
ಸದನಕ್ಕೂ ಮುಂಚೆ ವಿಪಕ್ಷ ನಾಯಕರ ಆಯ್ಕೆ: ಈಗಾಗಲೇ ಶಾಸಕಾಂಗದ ಸಭೆ ಮಾಡಲಾಗಿದೆ. ನಮ್ಮ ಕೇಂದ್ರದ ನಾಯಕರಾದ ಅರುಣಸಿಂಗ್ ಅವರು ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಮತ್ತೊಂದು ಸುತ್ತಿನ ಸಭೆ ಕರೆದು ವಿಪಕ್ಷ ನಾಯಕರ ಘೋಷಣೆ ಮಾಡಲಾಗುವುದು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾನು ಆಕಾಂಕ್ಷಿ ಎಂಬ ಪ್ರಶ್ನೆಯೇ ಇಲ್ಲ. ಈವರೆಗೆ ಯಾವುದೇ ಹುದ್ದೆಯನ್ನು ಕೇಳಿ ಪಡೆದಿಲ್ಲ. ಹೀಗಾಗಿ ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕೆ ಪಕ್ಷ ಕಟ್ಟುವುದು ಆಗಬೇಕಿದೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಪಕ್ಷಕ್ಕೆ ಕರೆಯುವ ಪ್ರಶ್ನೆ ಇಲ್ಲ: ನಾನು ಈಗಾಗಲೇ ನಮ್ಮ ಪಕ್ಷದ ಸೋಲಿಗೆ ನೈತಿಕ ಹೊಣೆಯನ್ನು ಹೊತ್ತಿದ್ದೇನೆ. ಹೀಗಾಗಿ ಮುಂದಿನ ಲೋಕಸಭೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಪ್ರಶ್ನೆ ಸದ್ಯಕ್ಕೆ ಇಲ್ಲ. ರಾಜಕಾರಣದಲ್ಲಿ ಭವಿಷ್ಯ ನುಡಿಯುವುದು ಬಹಳ ಕಷ್ಟ. ಜಗದೀಶ್ ಶೆಟ್ಟರ್ ಅವರು ಪುನಃ ಪಕ್ಷಕ್ಕೆ ಕರೆಯುವ ಪ್ರಶ್ನೆ ಇಲ್ಲ. ಅವರು ಕಾಂಗ್ರೆಸ್ ಪಕ್ಷದಲ್ಲಿ ಸಮಾಧಾನ ಇದೆ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾದ್ದಾಗ ಅವರ ಬಗ್ಗೆ ಹೆಚ್ಚು ವ್ಯಾಖ್ಯಾನ ಬೇಡಾ. ಅವರ ವೈಯಕ್ತಿಕ ನಿರ್ಣಯ ಇದೆ. ಅದಕ್ಕೆ ನಮ್ಮ ಬೆಲೆ ಇದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Previous articleರೆಡ್ಡಿ ದಂಪತಿ ಒಡೆತನದ ಆಸ್ತಿಗಳ ಜಪ್ತಿಗೆ ಆದೇಶ
Next articleತಾಯಿಯನ್ನೇ ಹತ್ಯೆ ಮಾಡಿದ ಮಗಳು: ಕಾರಣ ಹೀಗೂ ಉಂಟೇ