ದಾವಣಗೆರೆ: ಬಜರಂಗದಳ ಬ್ಯಾನ್ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಚಾರ ತೆಗೆದುಕೊಳ್ಳುತ್ತಿರುವ ಬಿಜೆಪಿಯ ಪ್ರಧಾನಿ ಮೋದಿ ಮತ್ತು ಶೋಭಕ್ಕ ಅವರು ಗೋವಾದಲ್ಲಿ ಶ್ರೀರಾಮಸೇನೆ ನಿಷೇಧಿಸಿ, ಮತ್ತೆ ಸಂಘಟನೆ ಮರುಚಾಲ್ತಿಗೆ ಅವಕಾಶ ಕೊಡದ ಸಂದರ್ಭದಲ್ಲಿ ಎಲ್ಲಿದ್ದರು? ಶ್ರೀರಾಮ ಹನುಮನಿಗೆ ಬಂಟನಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಹೊನ್ನಾಳಿಯಲ್ಲಿ ಡಿ.ಕೆ. ಶಾಂತನಗೌಡ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಶ್ರೀರಾಮಸೇನೆ ನಿಷೇಧಿಸಿದಾಗ ಬಾಯಿಬಿಚ್ಚದ ಇದೇ ಬಿಜೆಪಿಗರು ಈಗ ಬಜರಂಗದಳದ ಬಗ್ಗೆ ಮಾತನಾಡುತ್ತಿದ್ದಾರೆ. ಶ್ರೀರಾಮ ಹನುಮನ ಬಂಟ ಹಾಗಿದ್ದರು ಇವರೇಕೆ ಆಗ ಸುಮ್ಮನಿದ್ದರು ಎಂದು ಕಿಡಿಕಾರಿದರು.
ನಾನು ಹನುಮಾನ್ ಚಾಲೀಸ ಪಠಣೆ ಮಾಡುತ್ತೇನೆ ಎಂಬುದು ಸತ್ಯ. ನಾನು ಹನುಮಂತನ ಭಕ್ತ. ಆದರೆ, ಬಜರಂಗದಳಕ್ಕೂ ಬಜರಂಗಿಗೂ ಸಾಕಷ್ಟು ವ್ಯತ್ಯಾಸ ಇದೆ. ನೀವು ಅಮಾಯಕರನ್ನ ಹಾಳು ಮಾಡಿ ದೇಶ ಲೂಟಿ ಹೊಡೆದಿದ್ದೀರಿ. ನಿಮ್ಮ ಪಕ್ಷ ಬೆಳಸಿಕೊಳ್ಳಿ ನಮ್ಮದೇನು ಅಭ್ಯಂತರ ಇಲ್ಲ. ಆದರೆ, ಅನವಶ್ಯಕವಾಗಿ ಅಮಾಯಕರ ಜೀವ ಬಲಿ ಕೊಡಬೇಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ರೋಡ್ ಶೋಗೆ ಕಾಂಗ್ರೆಸ್‌ನವರು ಆಂಬುಲೆನ್ಸ್ ತರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾವು ಮೋದಿಯ ರೋಡ್ ಶೋಗೆ ಯಾವುದೇ ತೊಂದರೆ ಮಾಡಲ್ಲ. ಆಂಬುಲೆನ್ಸ್ ತರುವಂತ ನೀಚ ಕೆಲಸ ನಾವು ಮಾಡೋದಿಲ್ಲ. ಅವರು ರೋಡ್‌ನಲ್ಲೆ ಮಲಗಿಕೊಳ್ಳಲಿ, ಉರಳು ಸೇವೆ ಮಾಡಲಿ ನಾವೇನು ತೊಂದರೆ ಮಾಡಲ್ಲ. ಮೋದಿಗೆ ಹೋಗೊಕೆ, ಜನ ನಿಲ್ಲೋಕೆ ಎರಡು ರೋಡ್ ಕೊಟ್ಟಿದ್ದಾರೆ. ಆದರೆ, ಪ್ರೀಯಾಂಕ ಗಾಂಧಿಗೆ ಒಂದೇ ರೋಡ್ ಕೊಟ್ಟಿದ್ದಾರೆ. ಯಾಕೆಂದರೆ ಬಿಜೆಪಿಗೆ ಸೋಲು ನಿಶ್ಚಿತ ಎಂಬುದು ಗೊತ್ತಾಗಿದೆ ಎಂದು ಹರಿಹಾಯ್ದರು.