ಗಣೇಶ ಚತುರ್ಥಿ ಆಚರಣೆ ಎಂದು?

0
17

ಶಿವಕುಮಾರ ಹಳ್ಯಾಳ
ಹುಬ್ಬಳ್ಳಿ: ಪ್ರತಿಯೊಂದು ಹಬ್ಬಕ್ಕೂ ಅದರ ಹಿಂದೆ ಆಳವಾದ ಧಾರ್ಮಿಕ ಅರ್ಥವಿದೆ. ಅದಾಗ್ಯೂ ನಮ್ಮ ದೇಶದಲ್ಲಿ ಆಚರಿಸುವ ಹಬ್ಬಗಳ ಜೊತೆಯಲ್ಲಿ ಜ್ಯೋತಿಷ್ಯದ ಮಹತ್ವವೂ ಇದೆ. ಎಲ್ಲ ಹಬ್ಬಗಳಲ್ಲಿ ಕೆಲವು ನಿರ್ದಿಷ್ಟ ಆಚರಣೆಗಳನ್ನು ನಡೆಸಲಾಗುತ್ತದೆ ಮತ್ತು ಜ್ಯೋತಿಷ್ಯದ ದೃಷ್ಟಿಕೋನದಿಂದ ಸಾಕಷ್ಟು ಪ್ರಸ್ತುತತೆಯನ್ನು ಹೊಂದಿರುವ ಹಬ್ಬ ಗಣೇಶ ಚತುರ್ಥಿ.
ಹಿಂದು ಧರ್ಮದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆ ೧೦ ದಿನಗಳ ಕಾಲ ನಡೆಯುತ್ತದೆ. ಅಂದು ಗಣೇಶನಿಗೆ ಡೋಲು ಬಾರಿಸುವ ಮೂಲಕ ಭವ್ಯವಾದ ಸ್ವಾಗತವನ್ನು ನೀಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.
ಆದರೆ, ಈ ವರ್ಷ ಗಣೇಶ ಚತುರ್ಥಿ ಹಬ್ಬದ ದಿನಾಂಕದ ಗೊಂದಲ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವು ಕ್ಯಾಲೆಂಡರ್‌ಗಳಲ್ಲಿ ಗಣೇಶ ಹಬ್ಬ ಸೆ. 18 ಎಂದೂ ಇದೆ, ಇನ್ನೂ ಕೆಲವು ಕ್ಯಾಲೆಂಡರ್‌ಗಳಲ್ಲಿ ಸೆ. 19 ಎಂದೂ ನಮೂದಾಗಿದೆ. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ಹಿಂದೂ ಸಂಪ್ರದಾಯದ ಕೆಲ ಪಂಚಾಂಗಗಳ ಪ್ರಕಾರ ಗಣೇಶ ಚತುರ್ಥಿ ಆಚರಣೆಯ ದಿನಾಂಕದ ಬಗ್ಗೆ ವೈದಿಕ ಪಂಡಿತರು ಭಿನ್ನ ದಿನಾಂಕಗಳನ್ನು ತಿಳಿಸುತ್ತಿದ್ದಾರೆ. ಪಂಚಾಂಗಗಳ ಉಲ್ಲೇಖಿಸಿ ಬಹುಪಾಲು ವಿದ್ವಾಂಸರು ಸೆ. 18ರಂದು (ಸೋಮವಾರ) ಹಬ್ಬವನ್ನು ಆಚರಿಸುವುದು ಸೂಕ್ತ ಎಂದು ತಿಳಿಸಿದರೆ ಇನ್ನೂ ಕೆಲವರು ಸೆ. 19ರಂದು (ಮಂಗಳವಾರ) ಆಚರಿಸಿದರೆ ಒಳಿತು ಎಂಬ ಸಲಹೆ ನೀಡಿದ್ದಾರೆ.
ಅಧಿಕಮಾಸದ ಹಿನ್ನೆಲೆಯಲ್ಲಿ ಒಂದು ದಿನ ಲೋಪ ಬಂದ ಕಾರಣ ಪ್ರಸ್ತುತ ವರ್ಷ 11 ದಿನ ಗಣೇಶೋತ್ಸವ ಬದಲು 10 ದಿನ ಆಚರಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸೆ. 19ಕ್ಕೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಸೆ. 28ಕ್ಕೆ ಅದ್ಧೂರಿ ಮೆರವಣಿಗೆ ಮೂಲಕ ಮೂರ್ತಿಗಳನ್ನು ವಿಸರ್ಜಿಸಿ ಉತ್ಸವಕ್ಕೆ ಮಂಗಳಹಾಡುವ ಕುರಿತು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಒಮ್ಮತದ ತೀರ್ಮಾನ ಕೈಗೊಂಡಿದೆ.
ಮಹಾಮಂಡಳ ಬೆಳಗಾವಿ, ಕೊಲ್ಲಾಪುರ ಭಾಗದವರನ್ನು ಹಾಗೂ ಕೆಲವು ಪುರೋಹಿತ, ಸ್ವಾಮೀಜಿಗಳನ್ನು ಸಂಪರ್ಕಿಸಿದಾಗ ಸೆ. 19ರಂದು ಮೂರ್ತಿ ಪ್ರತಿಷ್ಠಾಪಿಸಲು ತಿಳಿಸಿದ್ದಾರೆ. ಢಾಕ್ ಪಂಚಾಂಗದಲ್ಲೂ ಅದೇ ದಿನ ನಮೂದಾಗಿರುವುದರಿಂದ, ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ತಿಳಿಸಿದೆ.
ಆದರೆ, ವಿದ್ವಾಂಸರು ಸೂರ್ಯ ಸಿದ್ದಾಂತ ಆಧಾರಿತ ಪಂಚಾಂಗದ ಅನುಗುಣವಾಗಿ ಸೆ. 18ರಂದು ಗೌರಿ ತೃತೀಯ ಹಾಗೂ ಗಣೇಶ ಚತುರ್ಥಿ ಒಂದೇ ದಿನ ಬಂದಿರುವುದರಿಂದ ಅದೇ ದಿನ ಸೂಕ್ತ ಎಂದು ತಿಳಿಸಿದ್ದಾರೆ. ದೃಗ್ಗಣಿತ ಸಿದ್ದಾಂತ ಆಧಾರಿತ ಪಂಚಾಂಗದ ಪ್ರಕಾರ ಸೆ. 19ರಂದು ಗಣೇಶ ಚತುರ್ಥಿ ಆಚರಣೆಗೆ ಸೂಕ್ತ ಎಂದು ಹಲವು ವೈದಿಕ ಪಂಡಿತರು ಸೂಚಿಸಿದ್ದಾರೆ.

ಸೂರ್ಯ ಸಿದ್ದಾಂತ ಆಧಾರಿತ ಪಂಚಾಂಗದ ಪ್ರಕಾರ ಗಣೇಶ ಚತುರ್ಥಿಯನ್ನು ಸೆ. 18ರಂದು ಆಚರಿಸಲಾಗುತ್ತದೆ. ಸೆ. 18ರಂದು ಮಧ್ಯಾಹ್ನ ೧೨.೪೦ಕ್ಕೆ ಚೌತಿ ಪ್ರಾರಂಭವಾಗಿ ಸೆ. ೧೯ರಂದು ಮಧ್ಯಾಹ್ನ ೧.೪೩ಕ್ಕೆ ಕೊನೆಗೊಳ್ಳುತ್ತದೆ. ಸಾರ್ವಜನಿಕರು ಸೆ. ೧೮ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದೇ ಸೂಕ್ತ.

ರಾಜೇಶ್ವರ ಶಾಸ್ತ್ರಿ, ಧಾರವಾಡ ಪಂಚಾಂಗ ಕರ್ತರು.

ಗೌರಿ ತೃತೀಯ ಹಾಗೂ ಗಣೇಶ ಚತುರ್ಥಿ ಸೆ. ೧೮ರಂದು ಒಂದೇ ದಿನ ಬಂದಿರುವುದರಿಂದ ಗಣೇಶ ಪ್ರತಿಷ್ಠಾನೆಗೆ ಸೆ. ೧೮ ಪ್ರಶಸ್ತ ದಿನವಾಗಿದೆ. ಚೌತಿಯಲ್ಲಿ ಚಂದ್ರನ ಉದಯ ಮತ್ತು ಚಂದ್ರನ ಅಸ್ತಮವನ್ನು ಸೆ. ೧೮ರಂದು ನಿಗದಿಪಡಿಸಲಾಗಿದೆ. ಆದ್ದರಿಂದ ಅದೇ ದಿನ ಗಣೇಶ ಪ್ರತಿಷ್ಠಾಪನೆಗೆ ಒತ್ತು ನೀಡಲಾಗುತ್ತದೆ.

ಸಮೀರ್ ಆಚಾರ್ಯ ಕಂಠಪಲ್ಲೀ, ಸಂಸ್ಕೃತ ಪಂಡಿತ.

ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದೆ. ಢಾಕ್ ಪಂಚಾಂಗದ ಪ್ರಕಾರ ಹಾಗೂ ಮಹಾರಾಷ್ಟ್ರ, ಮಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸೆ. 19ರಂದು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅದರಂತೆ ಸೆ. 19ರಂದು ಗಣೇಶೋತ್ಸವ ಆಚರಿಸಲಾಗುವುದು.

ಅಮರೇಶ ಹಿಪ್ಪರಗಿ, ಕಾರ್ಯದರ್ಶಿ, ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಕಾರ್ಯದರ್ಶಿ.

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಸೆ.೧೮ ರಂದು ಪ್ರತಿಷ್ಠಾಪನೆ ಮಾಡಬೇಕು. ಸಾರ್ವಜನಿಕ ಗಣೇಶ ಮಂಡಳಿಯವರು ಸೆ. ೧೯ರಂದು ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಿ.

ಗುರುರಾಜ ಆಚಾರ್ಯ ಹೆರಕಲ್ಲ, ಸಾಕ್ಷಿ ಪಂಚಾಂಗ ಕರ್ತರು, ವಿಜಯಪುರ.

Previous articleಕಾವೇರಿ ನೀರು: ತಮಿಳುನಾಡಿಗೆ 15 ದಿನ ನೀರು ಹರಿಸಲು ಸೂಚನೆ
Next articleಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ