ಕೊಪ್ಪಳ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಗೆ ಮನವಿ ಮಾಡಿದರು.
ಜಿಲ್ಲಾ ಕೇಂದ್ರವಾಗಿದ್ದರೂ ಇಲ್ಲಿನ ರಸ್ತೆಗಳು ಹಾಳಾಗಿವೆ. ಗ್ರಾಮೀಣ ಭಾಗದ ರಸ್ತೆಗಳು ಕೂಡಾ ಹದಗೆಟ್ಟಿವೆ. ಕೊಪ್ಪಳದ ಮೂಲಕ ಹಾದು ಹೋಗುವ ಕಲ್ಮಲಾ- ಸಿಗ್ಗಾಂವಿ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಕೊಪ್ಪಳ ನಗರದ ಅಣತೆ ದೂರದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಂದ ಹೊರಸೂಸುವ ಕರಿ ಬೂದಿ ನಗರಕ್ಕೂ ಅಂಟಿಕೊಂಡಿದ್ದು,. ಕರೆಬೂದಿ ನಗರದ ಸೌಂದರ್ಯ್ಯವನ್ನು ಮತ್ತು ಇಲ್ಲಿನ ನಾಗರಿಕರ ಮೇಲೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕೂಡಲೇ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಬೇಕು ಎಂದು ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು ಮನವಿ ಮೂಲಕ ಒತ್ತಾಯಿಸಿದರು.
ಡಾ.ಸರೋಜಿನಿ ಮಹಿಷಿ ವರದಿ ಜಾರಿಮಾಡಲು ಕ್ರಮ ವಹಿಸಬೇಕು. ಕೈಗಾರಿಕೆಗಾಗಿ ತೆಗೆದುಕೊಂಡು ಬಳಸದ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು. ಕೊಪ್ಪಳಕ್ಕೆ ಮಂಜೂರಾದ ವಿಶ್ವವಿದ್ಯಾಲವು ನಗರದಲ್ಲಿ ಸ್ಥಳ ಇಲ್ಲದ ಕಾರಣ ಭಾನಾಪೂರದ ಇಂಜನೀಯರಿಂಗ್ ಕಾಲೇಜ್‌ಗೆ ಸ್ಥಳಾಂತರಗೊಂಡಿದೆ. ಈ ಕೂಡಲೇ ವಿಶ್ವವಿದ್ಯಾಲಯಕ್ಕೆ ನಗರದಲ್ಲಿ ಜಾಗ ಕೊಡಿಸಬೇಕು. ವಿಶ್ವವಿದ್ಯಾಲಯ ಜಿಲ್ಲಾ ಕೇಂದ್ರಕ್ಕೆ ಉಳಿಯುವಂತೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದರಿಂದ ರೈತರಿಗೆ ತೊಂದರೆಯಾಗಿದ್ದು, ಜಿಂಕೆವನ ಸ್ಥಾಪನೆ ಮಾಡಬೇಕು. ವಿದ್ಯುತ್ ದರ ಏರಿಕೆಯನ್ನು ಈ ಕೂಡಲೇ ಕೈಬಿಡಬೇಕು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಮನವಿ ಮಾಡಿದರು.
ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಜಿಲ್ಲೆಯಾದ್ಯಂತ ಆರ್‌ಓ ಪ್ಲಾಂಟ್‌ಗಳನ್ನು ದುರಸ್ತಿ ಯಾಗಬೇಕು. ಜಿಲ್ಲೆಯಾದ್ಯಂತ ಇಸ್ಪೀಟ್ ಅಡ್ಡೆಗಳ ಕ್ಲಬ್‌ಗಳು ಜೋರಾಗಿದ್ದು, ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಾದ್ಯಂತ ಕೆಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದು, ಕೂಡಲೇ ಅವುಗಳಿಗೆ ಶಾಶ್ವತ ಕಟ್ಟಡ ಒದಗಿಸಬೇಕು. ನೆನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರ ಕಟ್ಟಡ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಅನ್ನಭಾಗ್ಯ ಅಕ್ಕಿಯನ್ನು ಕಾಳು ಸಂತೆಯಲ್ಲಿ ಮಾರಾಟ ಆಗುತ್ತಿದ್ದು, ಇದನ್ನು ತಡೆಯಬೇಕು ಎಂದು ಸೇನೆಯ ಪದಾಧಿಕಾರಿಗಳು ಆಗ್ರಹಿಸಿದರು.
ಮುದ್ದಪ್ಪ ಗೊಂದಿಹೊಸಳ್ಳಿ, ಮಾಂತೇಶ್ ಆದಿಸಿರಿ, ಮರಿಯಪ್ಪ ಮಂಗಳೂರು, ರಫಿ ಲೋಹರ್, ಬಸವರಾಜ ಕೊಪ್ಪಳ, ಗವಿಸಿದ್ದಪ್ಪ ಭಜಂತ್ರಿ, ಆನಂದ ಮಡಿವಾಳರ್, ಶ್ಯಾಮ್ ಬೆನಗಾಳ, ಸುನೀಲ್ ಸಂಗಟಿ ಇದ್ದರು.