ಹುಬ್ಬಳ್ಳಿ: ಧಾರವಾಡ ಸಮೀಪ ಕೋಟೂರು-ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನಾ ಕ್ಲಸ್ಟರ್ ನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಥಾಪನೆ ಮಾಡಲಿದೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಕೇಂದ್ರ ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಕ್ಲಸ್ಟರ್‌ಗೆ ೧೫೦೦ ಕೋಟಿ ರೂ ಅಧಿಕ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಕ್ಲಸ್ಟರ್ ನಿರ್ಮಾಣಕ್ಕೆ ಒಪ್ಪಿಗೆ ಜೊತೆಗೆ ಒಟ್ಟು ೧೭೯ ಕೋಟಿ ರೂಗಳಲ್ಲಿ ಕೇಂದ್ರ ಸರ್ಕಾರ ೮೯ ಕೋಟಿ ರೂ ಬಿಡುಗಡೆ ಮಾಡಲಿದ್ದು, ೧೮೦೦೦ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಜಿಲ್ಲೆಯ ಮತ್ತು ರಾಜ್ಯದ ಆರ್ಥಿಕತೆಗೆ ಬಲ ತುಂಬಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿ ಕರ್ನಾಟಕವು ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯ ಪ್ರಮುಖ ರಾಜ್ಯವಾಗಿ ಹೊರಹೊಮ್ಮಲಿದೆ. ಈ ಕ್ಲಸ್ಟರ್ ಧಾರವಾಡ ಜಿಲ್ಲೆಗೆ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ಎಲೆಕ್ಟ್ರಾನಿಕ್ ಹಾಗೂ ಐಟಿಯ ರಾಜ್ಯ ಖಾತೆ ಸಚಿವ ರಾಜೀವ ಚಂದ್ರಶೇಖರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.