ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣದ ದೂರದೃಷ್ಟಿಯ ಮುತ್ಸದ್ದಿ ನಾಯಕ

ಬೆಂಗಳೂರು: ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣದ ದೂರದೃಷ್ಟಿಯ ಮುತ್ಸದ್ದಿ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ ಬಾಬು ಜಗಜೀವನರಾಮ್ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುತ್ತಿದ್ದು, 2017ರಲ್ಲಿ ನಮ್ಮ ಸರ್ಕಾರ ಪ್ರತಿ ವರ್ಷ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ತೀರ್ಮಾನವನ್ನು ಕೈಗೊಂಡಿತು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭಿಸಲಾಯಿತು. ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಸರ್ಕಾರ ಕೈಗೆತ್ತಿಗೊಂಡಿದೆ ಎಂದರು.

ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಕಂಪೇಗೌಡರದ್ದು
ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಕೆಂಪೇಗೌಡರೇ ಮೂಲ ಕಾರಣ. ವಿಶ್ವಮಟ್ಟದಲ್ಲಿ ಬೆಂಗಳೂರು ಅತಿವೇಗದಲ್ಲಿ ಬೆಳೆಯುತ್ತಿರುವ ನಗರ. ಎಲ್ಲ ಜನರನ್ನೊಳಗೊಂಡ ಅಭಿವೃದ್ಧಿಗೊಳಿಸುವ, ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಕೈಗೊಂಡಿದ್ದರು. ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣವೇ ನಮ್ಮ ಸಂವಿಧಾನದ ಆಶಯ. 500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ದೂರದೃಷ್ಟಿಯನ್ನು ಹೊಂದಿದ್ದ ಮುತ್ಸದ್ದಿ ನಾಯಕರಾಗಿದ್ದರು. ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.

ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರು ಕಾರಣ
ಹಂಪಿ ಬಹಳ ಪ್ರವರ್ಧಮಾನಕ್ಕೆ ಬಂದಿದ್ದ ಕಾಲದಲ್ಲಿ ಪ್ರೇರಣೆ ಪಡೆದು ಬೆಂಗಳೂರನ್ನು ಅಭಿವೃದ್ಧಿಪಡಿಸುವ ಉದ್ದೇಶ ಕೆಂಪೇಗೌಡರಿಗಿತ್ತು. ಹಾಗಾಗಿ ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಸ್ಟಾರ್ಟ್ ಅಪ್ ರಾಜಧಾನಿ, ಶೈಕ್ಷಣಿಕ ಹಾಗೂ ಆರೋಗ್ಯ ಕೇಂದ್ರವಾಗಿದ್ದರೆ ಅದಕ್ಕೆ ಈ ನಗರದ ಅಡಿಪಾಯ ಹಾಕಿದ ಕೆಂಪೇಗೌಡರು ಕಾರಣ ಎಂದರು. ಬೆಂಗಳೂರನ್ನು ಇನ್ನಷ್ಟು ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಅದನ್ನು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಕೆಂಪೇಗೌಡರ ಆಡಳಿತ ಜನಪರವಾಗಿದ್ದು, ಅವರನ್ನು ನೆನೆದು ಸ್ಪೂರ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಕೆಂಪೇಗೌಡರ ಬಗ್ಗೆ ಅಗಾಧ ಗೌರವವನ್ನು ಇಟ್ಟುಕೊಂಡಿದ್ದು, ಅವರ ಆಡಳಿತದ ವೈಖರಿ ನಮ್ಮೆಲ್ಲರಿಗೂ ಸ್ಫೂರ್ತಿ. ಎಲಾ ಜಾತಿಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

ಪ್ರಶಸ್ತಿಗೆ ಭಾಜನವಾಗಿದೆ ಸಂಸ್ಥೆಗಳಿಗೆ ಅಭಿನಂದನೆ
ಐಐಎಸ್ಸಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರು ಸೋಪ್ಸ್ ಅಂಡ್ ಡಿಟಜೆಂಟ್ಸ್ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿದೆ. ಈ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಕೆಂಪೇಗೌಡ ಭವನಕ್ಕೆ ಶಂಕುಸ್ಥಾಪನೆ
ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಸುಮನಹಳ್ಳಿ ವೃತ್ತದಲ್ಲಿ ಕೆಂಪೇಗೌಡ ಭವನವನ್ನು ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದಷ್ಟು ಶೀಘ್ರವಾಗಿ ಕಟ್ಟಡವನ್ನು ನಿರ್ಮಾಣ ಮಾಡಿ ತಾವೇ ಉದ್ಘಾಟಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.