ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷವು 124 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರ ಟಿಕೆಟ್ ಲಭಿಸಿದೆ.
ಆದರೆ, ಕುಂದಗೋಳ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಮಿಸ್ ಆಗಿದೆ.
ಮೊದಲ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಕುಂದಗೋಳ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ಘೋಷಣೆ ಮಾಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಕಾರಣ ಏನಿರಬಹುದು?
ಕುಂದಗೋಳ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳು 12 ಕ್ಕೂ ಹೆಚ್ಚು ಜನರಿದ್ದು, ಟಿಕೇಟ್ ಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಲಿ ಶಾಸಕಿಗೆ ಟಿಕೆಟ್ ಕೊಟ್ಟರೆ ತಾವು ಯಾವುದೇ ರೀತಿ ಬೆಂಬಲಿಸುವುದಿಲ್ಲ. ಒಂದಾಗಿ ಕೆಲಸ ಮಾಡುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ಟಿಕೇಟ್ ಆಕಾಂಕ್ಷಿಗಳ ನಿಯೋಗ ಹೇಳಿಕೊಂಡಿದೆ ಎನ್ನಲಾಗಿದೆ.
ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರೂ ಕೂಡಾ, ಈ ಬಾರಿಯೂ ನನಗೆ ಟಿಕೇಟ್ ಪಕ್ಕಾ. ಪಕ್ಷದ ವರಿಷ್ಠರಿಗೆ ನನ್ನ ಬಗ್ಗೆ ದೂರಿರುವ ಆಕಾಂಕ್ಷಿಗಳಲ್ಲಿ ಯಾರೂ ಕಳೆದ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿಲ್ಲ. ಏನಿದ್ದರೂ ನನ್ನ ಪತಿ ಸಿ.ಎಸ್ ಶಿವಳ್ಳಿ ಅವರ ಮೇಲಿನ ಅಭಿಮಾನ, ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಕ್ಷೇತ್ರದ ಜನರು ಆಶೀರ್ವಾದಿಸಿದ್ದಾರೆ. ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. ಬಿಜೆಪಿ ಸರ್ಕಾರವಿದ್ದರೂ ಮನವರಿಕೆ ಮಾಡಿ ಹೆಚ್ಚಿನ ಅನುದಾನ ತಂದಿದ್ದೇನೆ. ಮಹಿಳಾ ಕೋಟಾದಲ್ಲಿ , ಹಾಲಿ ಶಾಸಕಿ ಆಗಿರುವುದರಿಂದ ಟಿಕೇಟ್ ನನಗೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ಶನಿವಾರ ಪ್ರಕಟಗೊಂಡ ಮೊದಲ ಪಟ್ಟಿಯಲ್ಲಿ ಕುಸುಮಾವತಿ ಅವರ ಹೆಸರು ಮಿಸ್ ಆಗಿರುವುದು ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಗಳ ಕೈ ಮೊದಲ ಹಂತದಲ್ಲಿ ಮೇಲಾಯಿತೇ? ಎಂಬಂತೆ ಕಾಣುತ್ತಿದೆ.
ಹಾಲಿ ಶಾಸಕಿ ವಿರುದ್ಧ ಭಿನ್ನಮತ ಧ್ವನಿ ಎತ್ತಿರುವ ಟಿಕೇಟ್ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಮೊದಲ ಪಟ್ಟಿಯಲ್ಲಿ ಕುಸುಮಾವತಿ ಅವರ ಹೆಸರು ಪ್ರಕಟಿಸದೇ ಪಕ್ಷದ ವರಿಷ್ಠರು ಈ ನಿರ್ಧಾರ ಕೈಗೊಂಡರೆ? ಎರಡನೇ ಪಟ್ಟಿಯಲ್ಲಿ ಕುಸುಮಾವತಿ ಹೆಸರು ಪ್ರಕಟಿಸಬಹುದೇ ಎಂಬುದನ್ನು ಕಾದು ನೋಡಬೇಕಿದೆ.