ಹುಬ್ಬಳ್ಳಿ: ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನನಗೆ ಕಾಂಗ್ರೆಸ್ ಪಕ್ಷದ ನಾಯಕರಿಂದಲೂ ಪಕ್ಷ ಸೇರ್ಪಡೆಗೆ ಬಗ್ಗೆ ಆಹ್ವಾನವೂ ಬಂದಿಲ್ಲ. ಸದ್ಯಕ್ಕೆ ಕೆಲವು ತಿಂಗಳು ಸಕ್ರಿಯ ರಾಜಕಾರಣದಿಂದ ದೂರ ಇರಲಿದ್ದೇನೆ. ಜನವರಿ ತಿಂಗಳಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ನಾನೇ ಮಾಧ್ಯಮದವರಿಗೆ ಮಾಹಿತಿ ಕೊಡುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂಬ ವದಂತಿ ಇದೆ. ಇದು ಸತ್ಯಕ್ಕೆ ದೂರವಾದುದು. ಮೊನ್ನೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮಾಧ್ಯಮದವರಿಗೆ ಹೇಳಿಕೆ ನೀಡುವಾಗ ಮಾಜಿ ಸಚಿವ ಮುನೇನಕೊಪ್ಪ ಅವರು ಕಾಂಗ್ರೆಸ್ ಬರುವ ಮಾಹಿತಿ ಇದೆ ಎಂದು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಕಾಂಗ್ರೆಸ್‌ನ ಯಾವ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ. ನಾನೂ ಆ ನಾಯಕರೊಂದಿಗೆ ಮಾತನಾಡಿಲ್ಲ. ನಾನು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿಯೇ ಇಲ್ಲ ಎಂದರು.