ಹುಬ್ಬಳ್ಳಿ: ಕಾಂಗ್ರೆಸ್ ಆಶ್ವಾಸನೆಗಳು ಬೋಗಸ್, ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ಮೋಸ ಮಾಡಿದ್ದಾರೆ. ಘೋಷಿಸಿರುವ ಯೋಜನೆಗಳು ಜನರಿಗೆ ಸಿಗದಂತೆ ಹಲವು ಷರತ್ತು ಹಾಕಿದ್ದಾರೆ. ಇದು ಕಾಡುವ ದೇವರ ಕಾಟ ಕಳೆಯುವ ಯತ್ನವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಬಗ್ಗೆ ಟೀಕಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ಕಾಂಗ್ರೆಸ್‌ನವರೇ ನಿರುದ್ಯೋಗಿಗಳಾಗಿದ್ದರು. ಈಗ ಭಜರಂಗದಳ, ಬಿಜೆಪಿ ಹೆಸರು ಹೇಳಿ ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ನಳೀನಕುಮಾರ ಕಟೀಲ್ ಬಗ್ಗೆ ಕಾಂಗ್ರೆಸ್ ಅಹಂಕಾರದಿಂದ ವರ್ತಿಸುತ್ತಿದೆ. ಹೀಗಾಗಿಯೇ ಕಾಂಗ್ರೆಸ್‌ಗೆ ಅನೇಕ ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ಸಿಗರು ಮೊದಲು ತಮ್ಮ ಯೋಗ್ಯತೆ ಏನಿದೆ ಎಂದು ತಿಳಿದುಕೊಳ್ಳಲಿ ಎಂದರು.
ಓಡಿಸ್ಸಾ ರೈಲು ದುರಂತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಅತ್ಯಂತ ದುಃಖದ ವಿಚಾರ. ಕಳೆದ ಮೂರು ವರ್ಷಗಳಿಂದ ರೈಲ್ವೆ ಬಹುತೇಕ ಅಪಘಾತ ರಹಿತವಾಗಿತ್ತು. ಈಗ ಬಹುದೊಡ್ಡ ರೈಲ್ವೆ ದುರಂತವಾಗಿ ಭಾರೀ ಆಘಾತವಾಗಿದೆ. ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಮುಂದೆ ಈ ರೀತಿ ಆಗದಂತೆ ಸಂಪೂರ್ಣ ತನಿಖೆ ಮಾಡಿ ಎಚ್ಚರಿಕೆ ವಹಿಸಲಾಗುವುದು. ಝೀರೋ ಎರರ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಸಿಲುಕಿರುವ ಕರ್ನಾಟಕದ ಜನರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದರು.