ಚಿಕ್ಕೋಡಿ: ಕಾಂಗ್ರೆಸ್‌ನದು 85 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರ. ಕೇಂದ್ರದಲ್ಲಿ ೧೦೦ ರೂಪಾಯಿ ಬಿಡುಗಡೆ ಮಾಡಿದರೆ ೧೫ ರೂಪಾಯಿ ಮಾತ್ರ ಹಳ್ಳಿಗೆ ಬಂದು ಮುಟ್ಟುತ್ತದೆ. ಇದನ್ನು ನಾನು ಹೇಳಿದ್ದಲ್ಲ. ಅವರದೇ ಪಕ್ಷದ ಮಾಜಿ ಪ್ರಧಾನಿ ರಾಜೀವ ಗಾಂಧಿ. ಕಾಂಗ್ರೆಸ್ ಮೊದಲಿನಿಂದಲೂ ೮೫ ಪರ್ಸೆಟ್ ಭ್ರಷ್ಟಾಚಾರ ಮಾಡಿಕೊಂಡೇ ಬಂದಿದೆ. ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಕಾಂಗ್ರೆಸ್‌ನ ಅವಿಭಾಜ್ಯ ಅಂಗ. ಇಂತವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ, ನಾಚಿಕೆ ಅಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಯಮಕನಮರಡಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ರೋಡ್ ಶೋ ನಡೆಸಿ ಬಳಿಕ ಸೇರಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ೨೦೧೩-೧೮ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ, ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿ ನಡೆಸದೇ ಬಿಲ್ ತೆಗದ್ರು, ಎಸ್ಸಿ, ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಿದ ದಿಂಬುಗಳ ಪೂರೈಕೆಯಲ್ಲೂ ಭ್ರಷ್ಟಾಚಾರ. ಇವರು ಭ್ರಷ್ಟಾಚಾರ ನಡೆಸದ ಒಂದು ಕಾಮಗಾರಿಯೂ ಇಲ್ಲ. ಇಂತವರು ನಮಗೆ ಭ್ರಷ್ಟಾಚಾರದ ಪಾಠ ಮಾಡಲು ಬರುತ್ತಿದ್ದಾರೆ ಎಂದು ಹರಿಹಾಯ್ದರು.
ಸಾಮಾಜಿಕ ನ್ಯಾಯದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ೬೦ ವರ್ಷವಾದರೂ ಎಸ್ಸಿ, ಎಸ್ಟಿ ಜನಾಂಗಕ್ಕೆ ಹಿಂದುಳಿದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿಲ್ಲ. ಬರೀ ಭಾಷಣ ಮಾಡಿದ್ದೆ ಬಂತು. ಆದರೆ, ನಾನು ಎಸ್ಸಿಗೆ ೧೫ ಪರ್ಸೆಂಟ್ ಇದ್ದದ್ದನ್ನು ೧೭ಕ್ಕೆ, ಎಸ್ಟಿಯವರಿಗೆ ೫ ಇದ್ದ ಮೀಸಲಾತಿಯನ್ನ ೭ಕ್ಕೆ ಹೆಚ್ಚಿಸಿದೆ. ಲಿಂಗಾಯತರ, ಒಕ್ಕಲಿಗರ, ಇತರ ಹಿಂದುಳಿದವರ ಮೀಸಲಾತಿ ಹೆಚ್ಚಿಸಿ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಕಾಂಗ್ರೆಸ್‌ನವರು ಮೀಸಲಾತಿಯ ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಎಂದು ಹೆದರಿಸಿದರು. ಆದ್ರೆ, ಜೇನು ನನ್ನ ಕೈ ಕಚ್ಚಿದರೂ ಪರವಾಗಿಲ್ಲ. ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದೆ. ಇದಕ್ಕೂ ಕಾಂಗ್ರೆಸ್‌ನವರಿಗೆ ಹೊಟ್ಟೆ ಉರಿ. ಹಿಂಬಾಗಿಲ ಮೂಲಕ ನ್ಯಾಯಾಲಯಕ್ಕೆ ಹೋದ್ರು. ಆದರೆ, ನಾನು ಮೀಸಲಾತಿ ನೀಡಿರುವುದು ಅಷ್ಟೇ ಅಲ್ಲ, ಅದಕ್ಕೆ ಬೇಕಾದ ಕಾನೂನುಬದ್ಧತೆಯನ್ನು ನೀಡಿದ್ದೇನೆ ಎಂದರು.