ಕಲಬುರಗಿಯಲ್ಲಿ 9ರಿಂದ ಪಂಚರತ್ನ ರಥಯಾತ್ರೆ

0
29
ಪಂಚರತ್ನ

ಕಲಬುರಗಿ: ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ಜನವರಿ 9ರಂದು ಕಲಬುರಗಿ ಜಿಲ್ಲೆಗೆ ಪ್ರವೇಶಿಸಲಿದೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುರೇಶ ಮಹಾಗಾಂವಕರ್ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಜ. 9ರಿಂದ 13ರವರೆಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ರಥಯಾತ್ರೆ ಕಾರ್ಯಕ್ರಮ ನಡೆಯಲಿದೆ ಎಂದರು.
ರಥಯಾತ್ರೆಯು 9ರಂದು ನೆರೆಯ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಜಿಲ್ಲೆಗೆ ಪ್ರವೇಶಿಸಲಿದ್ದು, ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ. ಬಳಿಕ ಆಳಂದದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಮುನವಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವರು. 10ರಂದು ಚಿಂಚೋಳಿಯಲ್ಲಿ ರೋಡ್ ಶೋ, ಬಹಿರಂಗ ಸಭೆ ನಡೆಸುವರು. 11ರಂದು ಸೇಡಂ, 12ರಂದು ಅಫಜಲಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸುವರು. ಅಂದು ರಾತ್ರಿ 8 ಗಂಟೆಗೆ ಮಣ್ಣೂರ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ ನಂತರ ಮಾಶಾಳ ಗ್ರಾಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವರು. 13ರಂದು ಕಲಬುರಗಿ ದಕ್ಷಿಣ ಮತ್ತು ಕಲಬುರಗಿ ಉತ್ತರ ಕ್ಷೇತ್ರಗಳಲ್ಲಿ ಬಹಿರಂಗ ಸಭೆ ನಡೆಯಲಿದೆ. ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳ ಬಗ್ಗೆ ವಿವರಿಸುವರು. ಪಕ್ಷದ ರಾಜ್ಯ ಮುಖಂಡರು, ಶಾಸಕರು ಪಾಲ್ಗೊಳ್ಳುವರು ಎಂದರು.

Previous articleಪ್ರಗತಿ ‌ಪರಿಶೀಲನಾ ಸಭೆ: ಫುಲ್‌ ಗರಂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ
Next articleಮೂವರ ದುರ್ಮರಣ: ನಾವಲಗಿ ನೀರವ ಮೌನ