ಕಮಿಷನ್ ಕಿರುಕುಳ: ಗ್ರಾಪಂ ಸದಸ್ಯೆ ರಾಜೀನಾಮೆ

0
18

ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯೆರೊಬ್ಬರು ಕಮಿಷನ್ ಕಿರುಕುಳಕ್ಕೆ ಬೇಸತ್ತು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ನಡೆದಿದೆ.

ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಪಂಚಾಯಿತಿ ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಎಂಬುವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರ ಕ್ಷೇತ್ರದಲ್ಲಿ ಈ ಕಮಿಷನ್ ಕಿರುಕುಳ ಆರೋಪ ಕೇಳಿಬಂದಿದೆ. ಗ್ರಾಮದ ಅಭಿವೃದ್ಧಿ ಕೆಲಸಗಳಿಗಾಗಿ ಕಾಮಗಾರಿ ಅನುಮೋದನೆಗೆ ಪಂಚಾಯಿತಿ ಅಧಿಕಾರಿಗಳಿಂದ ಶೇ. 30 ಕಮಿಷನ್ ಬೇಡಿಕೆ ಇದೆ. ಆದರೆ, ಕಮಿಷನ್ ನೀಡಲು ನನ್ನ ಕೈಯಿಂದ ಸಾಧ್ಯವಾಗದೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಂಚಾಯತಿಯ 14 ಮತ್ತು 15ನೇ ಹಣಕಾಸು, ಉದ್ಯೋಗ ಖಾತ್ರಿ ಯೋಜನೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆಗೆ ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. ಕ್ರಿಯಾಯೋಜನೆ ಅನುಮೋದನೆಗಾಗಿಯು ಮುಂಗಡವಾಗಿ ಶೇ. 3 ರಷ್ಟು ಹಣವನ್ನು ನೀಡಬೇಕಿದೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮುಗಂಡ ಹಣ ನೀಡಲು ಪಿಡಿಓ ಮಂಜುನಾಥ್ ದಳವಾಯಿ ಅವರು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದಾರೆ.
ಕಾಮಗಾರಿ ಬಳಿಕ‌ ಹಣದ ಬಿಲ್​​ಗಾಗಿ ಪಿಡಿಒಗೆ 10% ಇಂಜಿನೀಯರ್​ಗೆ 10% ತಾ.ಪಂ ಎಡಿ, ಎಒಗೆ 7% ಹಾಗೂ ಟೆಕ್ನಿಕಲ್​ಗೆ 3% ಸೇರಿ ಒಟ್ಟು 30% ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. ಇಷ್ಟು ಕಮಿಷನ್​ ಕೊಡಲು ಸಾಧ್ಯವಿಲ್ಲ. ಅಲ್ಲದೆ, ಇಷ್ಟೊಂದು ಕಮಿಷನ್​ ನೀಡಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಠಿಣವಾಗಿದೆ. ಹೀಗಾಗಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಸಿದ್ದಪ್ಪ ರಾಜಂಗಳೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Previous articleಅಪಘಾತ: ಓರ್ವ ಸಾವು
Next articleಲವ್ ಜಿಹಾದ್ ಗೆ ಬಲಿಯಾಗದಿರಿ