ಮೈಸೂರು: ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. 1935 ಸೆಪ್ಟಂಬರ್ 18 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಇವರು ಮೈಸೂರಿನಲ್ಲಿ ನೆಲೆಸಿದ್ದರು. ಜಿ.ಎಚ್. ನಾಯಕ ಅವರು ಪತ್ನಿ ಮೀರಾ, ಪುತ್ರಿ ಕೀರ್ತಿ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನಾಯಕರ ಉತ್ತರಾರ್ಧ ಕೃತಿಗೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಪೇಕ್ಷ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ನಿಜದನಿ ವಿಮರ್ಶಾ ಕೃತಿಗೆ ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ ಮತ್ತು ಪಂಪ ಪ್ರಶಸ್ತಿಯನ್ನು ನೀಡಲಾಗಿತ್ತು ಸಮಕಾಲೀನ, ಅನಿವಾರ್ಯ, ನಿರಪೇಕ್ಷೆ, ನಿಜದನಿ, ಉತ್ತರಾರ್ಧ, ಸಾಹಿತ್ಯ ಸಮೀಕ್ಷೆ, ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ ಹೀಗೆ ಹತ್ತಾರು ಕೃತಿಗಳನ್ನು ರಚಿಸಿದ್ದರು. ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳು, ಸಂವೇದನೆ(ಅಡಿಗರ ಗೌರವ ಗ್ರಂಥ), ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ ಹಾಗೂ ಶತಮಾನದ ಕನ್ನಡ ಸಾಹಿತ್ಯ ಕುರಿತ ಸಂಪಾದಕೀಯದ ಜತೆಗೆ ‘ಬಾಳು’ ಎಂಬ ಆತ್ಮಕಥನವನ್ನು ರಚಿಸಿದ್ದರು.