ಹುಬ್ಬಳ್ಳಿ: ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದ ಹುಬ್ಬಳ್ಳಿ-ಧಾರವಾಡ ಜನತೆಗೆ ಮಂಗಳವಾರ ೨ ಗಂಟೆಗೂ ಅಧಿಕ ಸಮಯ ಸುರಿದ ಮಳೆ ತಂಪು ನೀಡಿತು.
ಮೋಕಾ ಚಂಡುಮಾರುತದ ಪರಿಣಾಮ ಭಾರೀ ಗುಡುಗು, ಮಿಂಚು ಸಹಿತ ಸುರಿದ ಮಳೆ, ಕೆಲವರಲ್ಲಿ ಆಹ್ಲಾದ ಮೂಡಿಸಿದರೆ ಇನ್ನೂ ಕೆಲವರನ್ನು ಪರದಾಡುವಂತೆ ಮಾಡಿತು. ನಗರದಲ್ಲಿ ಜನ ಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ, ಚರಂಡಿಗಳೆಲ್ಲ ತುಂಬಿ ಹರಿದು ರಸ್ತೆಗಳನ್ನು ಅಂದಗೆಡಿಸಿತ್ತು.
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ, ದಾಜೀಬಾನ್ ಪೇಟ್, ಕೋಯಿನ್ ರಸ್ತೆ, ಕೊಪ್ಪೀಕರ ರಸ್ತೆ, ಹಳೇ ಹುಬ್ಬಳ್ಳಿ ಭಾಗ, ಉಣಕಲ್, ಸಾಯಿ ನಗರ ಮತ್ತು ವಿವಿಧ ಕಡೆಯ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಕೆರೆಯಂತೆ ಗೋಚರಿಸಿತು.
ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಅನುಕೂಲಕ್ಕಾಗಿ ಲ್ಯಾಮಿಂಗ್ಟನ್ ಶಾಲೆಯ ಬಳಿ ಅಳವಡಿಸಿದ್ದ ಶಾಮಿಯಾನ ಮಳೆಯ ರಭಸಕ್ಕೆ ಮಗುಚಿ ಬಿತ್ತು. ಎಸ್.ಎಂ. ಕೃಷ್ಣಾ ನಗರದ ಕೆಲ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ಯವ್ಯಸ್ತವಾಗಿತ್ತು.