ಐದನೇ ಗ್ಯಾರೆಂಟಿ: ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

0
20

ಮಂಗಳೂರು: ರಾಜ್ಯದಲ್ಲಿ ೧೫೦ ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಮಂಗಳೂರಿನಲ್ಲಿ ಇಂದು ಸಂಜೆ ಘೋಷಿಸಿದ್ದಾರೆ.
ನಗರಕ್ಕೆ ಹೊರವಲಯದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆದ ಕಾಂಗ್ರೆಸ್ ಚುನಾವಣ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನ ಐದನೇ ಗ್ಯಾರಂಟಿಯನ್ನು ಘೋಷಿಸಿದರು.
ಮೋದಿಯವರು ಹೇಳುತ್ತಾರೆ, ಕಾಂಗ್ರೆಸ್ ತಾನು ಜನತೆಗೆ ನೀಡಿದ ಗ್ಯಾರೆಂಟಿಯನ್ನು ಈಡೇರಿಸುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದ ಮೊದಲ ದಿನವೇ ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳೊಂದಿಗೆ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಹಣದ ಕೊರತೆ ಇಲ್ಲ. ಈ ಸರಕಾರ ೪೦ ಪರ್ಸೆಂಟ್ ಭ್ರಷ್ಟಾಚಾರದ ಮೂಲಕ ನಿಮ್ಮ ಹಣವನ್ನು ದೋಚಿದೆ. ದೋಚಿದ ಹಣದಲ್ಲಿ ಈ ಯೋಜನೆ ಜಾರಿಗೆ ಬರುವ ಮೂಲಕ ನಿಮ್ಮ ಹಣ ನಿಮ್ಮ ಕೈ ಸೇರಲಿದೆ ಎಂದರು.
ನಾವು ನುಡಿದಂತೆ ನಡೆಯುತ್ತೇವೆ, ೨ ಕೋಟಿ ಉದ್ಯೋಗ ಸೃಷ್ಟಿ, ೨೫ ಲಕ್ಷ ರೂ.ವನ್ನು ಬ್ಯಾಂಕ್ ಖಾತೆಗೆ ಹಾಕುವುದು ಸೇರಿದಂತೆ ನೀವು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುತ್ತೀರಾ ಎಂದು ಪ್ರಧಾನಿಯವರಿಗೆ ಸವಾಲು ಹಾಕಿದ ರಾಹುಲ್, ಈ ಸರಕಾರಕ್ಕೆ ೪೦ರ ಮೇಲೆ ಪ್ರೀತಿ ಹೆಚ್ಚು, ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಗೆ ಬರೇ ೪೦ ಸ್ಥಾನ ಮಾತ್ರ ನೀಡಿ ವ್ಯಂಗ್ಯವಾಡಿದರು.
ಮೋದಿ ಮತ್ತು ಅದಾನಿಗಿರುವ ಸಂಬಂದ ಏನು, ವಿದೇಶದಲ್ಲಿ ಬೇನಾಮಿ ಕಂಪೆನಿಯ ಹೆಸರಿನಲ್ಲಿರುವ ಹಣ ಯಾರದ್ದು, ಈ ಎಲ್ಲಾ ಪ್ರಶ್ನೆಗಳನ್ನು ಕೇಳಿದ ನನ್ನನ್ನು ಸಂಸತ್ತಿನಿಂದ ಹೊರ ಹಾಕಲಾಗಿದೆ, ಆದರೆ ಭ್ರಷ್ಟಾಚಾರದ ವಿರುದ್ಧ ನನ್ನ ಧ್ವನಿ ಎಂದಿಗೂ ನಿಲ್ಲುವುದಿಲ್ಲ. ನೀವು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ, ಬದಲಿಗೆ ಅದಾನಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೀರಿ. ಅದಾನಿ ಕೈಗೆ ವಿಮಾನ ನಿಲ್ದಾಣ, ಬಂದರು ಎಲ್ಲವನ್ನೂ ನೀಡಿದ್ದೀರಿ ಎಂದು ಆರೋಪಿಸಿದರು.


ರಾಜ್ಯದಲ್ಲಿ ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸಿದೆ. ಭ್ರಷ್ಟಾಚಾರದ ಮೂಲಕ ಅಧಿಕಾರ ಪಡೆದ ಬಿಜೆಪಿ ಎಲ್ಲಾ ಕ್ಷೇತ್ರದಲ್ಲಿಯೂ ಶೇ.೪೦ ಕಮೀಷನ್ ಪಡೆದಿದೆ. ಮಠದ ಕಾಮಗಾರಿಯಲ್ಲಿ ಶೇ. ೩೦ ಕಮೀಷನ್ ಪಡೆದು ಕಾಮಗಾರಿ ನಡೆಸಿದ್ದಾರೆ ಎನ್ನುವ ಬಗ್ಗೆ ಕರ್ನಾಟಕದ ಜನ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಬೆಲೆ ಏರಿಕೆ, ದೇಶದಲ್ಲಿ ೪೦ ಕೋಟಿ ಜನ ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ. ಶೇ ಎಂಟರಷ್ಟು ಜನರಲ್ಲಿ ಶೇ ೪೦ ಸಂಪತ್ತು ಶೇಖರಣೆಯಾಗಿದೆ. ೯೦ಲಕ್ಷ ಸಣ್ಣ ಕೈಗಾರಿಕೆಗಳು ಸಂಪೂರ್ಣ ಮುಚ್ಚಿದೆ. ೧.೪ ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದರು.
ಇಂದಿರಾ ಗಾಂಧಿ ಮಂಗಳೂರು ವಿಮಾನ ನಿಲ್ದಾಣ, ಬಂದರು ಎಂಸಿಎಫ್ ನಂತಹ ಕಾರ್ಖಾನೆಯನ್ನು ಇಲ್ಲಿ ಸ್ಥಾಪನೆ ಮತ್ತು ಅಭಿವೃದ್ಧಿ ಮಾಡಿರುವುದು ನನಗೆ ಗೊತ್ತಿದೆ. ಇಲ್ಲಿನ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಕೊಡುಗೆ ನೀಡಿದ್ದಾರೆ. ಇಂತಹ ಬ್ಯಾಂಕ್‌ಗಳನ್ನು ಮೋದಿ ಸರಕಾರ ವಿಲೀನಗೊಳಿಸಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಲಿ ಮಾತನಾಡಿ, ಕರಾವಳಿಯ ಸೌಹಾರ್ದತೆಯನ್ನು ಕದಡಿದ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಿ ಕರಾವಳಿಯಲ್ಲಿ ಮತ್ತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಬೇಕಾಗಿದೆ. ಇಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಕಾಂಗ್ರೆಸ್‌ನ್ನು ಬೆಂಬಲಿಸಿ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ ಪ್ರಧಾನಮಂತ್ರಿಗಳು ಈ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಿದ್ದಾರೆ. ನಾವು ಈ ಯೋಜನೆ ಜಾರಿ ಮಾಡದಿದ್ದರೆ ಮತ್ತೆ ನಿಮ್ಮ ಮುಂದೆ ಬಂದು ಮತ ಕೇಳುವುದಿಲ್ಲ. ಇದು ನಮ್ಮ ಶಪಥ ಎಂದ ಅವರು, ದಕ್ಷಿಣ ಕನ್ನಡ, ಕರಾವಳಿ ಭಾಗ ಬಿಜೆಪಿ ಶಕ್ತಿಯಾಗಿದೆ. ಆದರೆ ಅವರು ಭಾವನೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಾವು ಬದುಕಿನ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ನಿಮ್ಮ ಹೊಟ್ಟೆ ತುಂಬುವಂತೆ ಮಾಡಲು ನಾವು ಶ್ರಮಿಸುತ್ತೇವೆ. ಈ ಭ್ರಷ್ಟ ಸರ್ಕಾರವನ್ನು ಬಡಿದೋಡಿಸಬೇಕು. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇರಲಿ, ನಿಮ್ಮ ಗೌರವಕ್ಕೆ ಚ್ಯುತಿಬಾರದ ರೀತಿ ಕೆಲಸ ಮಾಡುವ ಭರವಸೆನೀಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ರಾಹುಲ್ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು. ಶಾಸಕ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಎಐಸಿಸಿ ವಕ್ತಾರರಾದ ಕೆ.ಸಿ.ವೇಣುಗೋಪಾಲ, ಚರಣ್ ಸಿಂಗ್ ಸಪ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ ಜೋನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಐವನ್ ಡಿ ಸೋಜ, ನಾಯಕರಾದ ಬಿ.ಇಬ್ರಾಹಿಂ, ಮುಖಂಡರಾದ ಮುಹಮ್ಮದ್ ಮಸೂದ್, ಇಬ್ರಾಹಿಂ ಕೋಡಿಜಾಲ್, ಜಿ.ಎ.ಬಾವ, ಭರತ್ ಮುಂಡೋಡಿ, ಲುಕ್ಮಾನ್ ಬಂಟ್ವಾಳ, ಮಮತಾ ಗಟ್ಟಿ, ಕೃಪಾ ಅಮರ್ ಆಳ್ವ, ಆರ್. ಪದ್ಮರಾಜ್ ಮೊದಲಾದವರಿದ್ದರು.
ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಸ್ವಾಗತಿಸಿ, ಬಡಗನ್ನೂರು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ ವಂದಿಸಿದರು.


ನೂಕು ನುಗ್ಗಲು..
ಸಮಾವೇಶಕ್ಕೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಪುಳಕ. ವೇದಿಕೆಯತ್ತ ಆಗಮಿಸಿದ ಅವರನ್ನು ನೋಡಲು ನೂಕು ನುಗ್ಗಲು ಉಂಟಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮೊದಲಾದವರು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಅಜಾನ್‌ಗೆ ಬಾಷಣ ಸ್ಥಗಿತ..
ರಾಹುಲ್ ಭಾಷಣ ಮಾಡುತ್ತಿದ್ದಂತೆಯೇ ಎದುರಿನ ಮಸೀದಿಯಿಂದ ಅಜಾನ್ ಕೇಳಿ ಬಂತು. ಆಗ ಭಾಷಣ ನಿಲ್ಲಿಸಿದ ರಾಹುಲ್ ಅಜಾನ್ ಮುಗಿದ ಬಳಿಕ ಭಾಷಣ ಮುಂದುವರೆಸಿದರು.

Previous articleದೇವಸ್ಥಾನಕ್ಕೆ ತೆರಳಲು ನಿರಾಕರಿಸಿದ ರಾಹುಲ್!
Next articleಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನಿರ್ಮಿಸಿದ ಮನೆಯ ಗೃಹ ಪ್ರವೇಶ