ಬಾಗಲಕೋಟೆ: ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ನೂತನ ಶಿಕ್ಷಣ ನೀತಿಯನ್ನು ಕೈಬಿಡದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ.
ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀರಾಯರ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲಕ್ಕೆ ಒತ್ತು ನೀಡಲಾಗಿದ್ದು, ವಿದ್ಯಾರ್ಥಿಗಳ ಸರ್ವತೋನ್ಮುಖ ಅಭಿವೃದ್ಧಿಗೆ ಆದ್ಯತೆ ಇದೆ. ಅದರಿಂದಾಗಿ ವ್ಯಕ್ತಿತ್ವ ವಿಕಸನಗೊಳ್ಳಲಿದೆ. ರಾಜ್ಯ ಸರ್ಕಾರ ಅಂಥ ನೀತಿಯನ್ನು ಕೈಬಿಡಬಾರದು. ಅದರಲ್ಲಿನ ಯಾವುದಾದರೂ ಅಂಶಗಳ ಬಗ್ಗೆ ಒಪ್ಪಿಗೆ ಇಲ್ಲವಾದರೆ ಅದನ್ನು ಚರ್ಚಿಸಲಿ ಅದರ ಹೊರತಾಗಿ ಇಡೀ ಶಿಕ್ಷಣ ನೀತಿಯನ್ನೇ ತಿರಸ್ಕರಿಸುವುದಾಗಿ ಹೇಳಿದರೆ ಅದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಿದಂತ್ತಾಗುತ್ತದೆ. ಆ ಕೆಲಸವಾಗಬಾರದು ಅದಕ್ಕಾಗಿ ಸರ್ಕಾರಕ್ಕೆ ಕೂಡಲೇ ಪತ್ರ ಬರೆಯುವುದಾಗಿ ತಿಳಿಸಿದರು.
ಬ್ರಾಹ್ಮಣರಿಗೆ ಪೂರಕವಾಗದ ಅನೇಕ ಕಾನೂನುಗಳನ್ನು ಆಳುವ ಸರ್ಕಾರಗಳು ತಂದಾಗಲೂ ವಿರೋಧಿಸದೆ ಅವುಗಳನ್ನು ಒಪ್ಪಿಕೊಂಡಿದ್ದೇವೆ. ಎಲ್ಲರನ್ನು ಒಳಗೊಳ್ಳುವ ಸ್ವಭಾವ ನಮ್ಮದಾದರೂ ಬ್ರಾಹ್ಮಣರು ಎಂಬ ಕಾರಣಕ್ಕೆ ವಿರೋಧಕ್ಕೆ ಒಳಗಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಅಮೇರಿಕ ಅಧ್ಯಕ್ಷ ಸ್ಥಾನಕ್ಕೆ ವಿವೇಕ ರಾಮಸ್ವಾಮಿ ಅವರ ಹೆಸರು ಕೇಳಿ ಬಂದಿದೆ. ಇಲ್ಲಿ ನಮ್ಮ ಬಗ್ಗೆ ಅಪಸ್ವರ, ಅಗೌರವದಿಂದ ಮಾತನಾಡಿದರೂ ಅಂತಾರಾಷ್ಟಿçÃಯ ಮಟ್ಟದಲ್ಲಿ ಬ್ರಾಹ್ಮಣರಿಗೆ ಗೌರವ ಸಿಗುತ್ತಿದೆ. ಪರದೇಶದಲ್ಲಿ ಬ್ರಾಹ್ಮಣರು ವಾಸಿಸುತ್ತಿದ್ದರೂ ಇಲ್ಲಿಯ ಆಚಾರಗಳನ್ನು ಬಿಡದಿರುವುದು ತೃಪ್ತಿಕರ ಎಂದು ಹೇಳಿದರು.
ಆಚಾರ್ಯತ್ರಯರು ಧರ್ಮ ಬೋಧಿಸಿದ್ದಾರೆ ಆದರೆ ಅವರ ಹೆಸರಿನಲ್ಲಿ ನಾವು ಬೇರೆಯಾಗಬಾರದು. ಸಮಾಜವನ್ನು ನಿಂದಿಸುವವರು ಬ್ರಾಹ್ಮಣರೆಂದೇ ಟೀಕಿಸುತ್ತಾರೆ ವಿನಾ ಒಳಪಂಗಡ, ವಿಚಾರ ನೋಡಿ ಟೀಕಿಸುವುದಿಲ್ಲ ಹೀಗಾಗಿ ಎಲ್ಲರೂ ಒಂದಾಗಬೇಕೆAದು ಸಲಹೆ ಮಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಕಡುಬಡವ ಹಿರಿಯ ನಾಗರಿಕರು, ಅಂಗವಿಕಲರಿಗೆ ಗೌರವಧನ ಒದಗಿಸಲಾಗುತ್ತಿದೆ. ಮಹಾಸಭೆಗಾಗಿ ಹಾವೇರಿಯಲ್ಲಿ ಜಾಗೆಯನ್ನು ಪಡೆಯಲಾಗಿದೆ ಎಂದು ವಿವರಿಸಿದರು. ಶಿಕ್ಷಣ ಒಂದರಿಂದಲೇ ಜೀವನ ರೂಪಗೊಳ್ಳುವುದಿಲ್ಲ. ಕೂಡು ಕುಟುಂಬದೊಂದಿಗೆ ಹೊಂದಿಕೊಳ್ಳುವ ಗುಣ, ತಂದೆ-ತಾಯಿ, ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಳ್ಳುವುದು ಸೇರಿದಂತೆ ಜೀವನ ಕಲೆಯೂ ಮುಖ್ಯವಾಗಿರುತ್ತದೆ. ಜೀವನದಲ್ಲಿ ಸಾಮಾನ್ಯ ಜ್ಞಾನ ಅತೀ ಮುಖ್ಯವಾಗಿರುತ್ತದೆ ಹೀಗಾಗಿ ಅಂಕಗಳಿಸುವುದು ಒಂದೇ ಬದುಕಾಗಬಾರದು ಎಂದು ಸಲಹೆ ಮಾಡಿದರು.ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರವೂ ದೊಡ್ಡದಾಗಿದ್ದು, ಸಮಾಜದ ಮಹಿಳಾ ಸಾಧಕಿಯರನ್ನು ಗುರುತಿಸಿ ಸಮಾವೇಶವನ್ನು ಹಮ್ಮಿಕೊಳ್ಳುವ ಯೋಚನೆಯಿದೆ ಎಂದರು.