ಹುಬ್ಬಳ್ಳಿ : ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಭಕ್ತರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ಚೆ ನಿಲ್ದಾಣದಿಂದ ಪಂಢರಪುರ ನಡುವೆ “ವಿಶೇಷ ಕಾಯ್ದಿರಿಸದ ರೈಲು’ ( unreserved) ಓಡಿಸಲಿದೆ ಎಂದು ನೈಋತ್ಯ ರೈಲ್ಚೆ ತಿಳಿಸಿದೆ.
ವಾರ್ಷಿಕ ಆಚರಣೆಗಳಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣವನ್ನು ಒದಗಿಸುವುದು ಈ ರೈಲುಗಳ ಉದ್ದೇಶವಾಗಿದೆ ಎಂದು ಹೇಳಿದೆ.
(ರೈಲು ಸಂಖ್ಯೆ 07313/07314 ) ಎಸ್ಎಸ್ಎಸ್ ಹುಬ್ಬಳ್ಳಿ–ಪಂಢರಪುರ–ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲುಗಳು ಜುಲೈ 1, 2025 ರಿಂದ ಜುಲೈ 8, 2025 ರವರೆಗೆ (04.07.2025 ಹೊರತುಪಡಿಸಿ) ಪ್ರತಿ ದಿಕ್ಕಿನಲ್ಲಿ ಏಳು ಟ್ರಿಪ್ ಸಂಚರಿಸಲಿವೆ.
ವಿವರಗಳು ಇಂತಿವೆ:
ರೈಲು ಸಂಖ್ಯೆ 07313 ಎಸ್ಎಸ್ಎಸ್ ಹುಬ್ಬಳ್ಳಿ–ಪಂಢರಪುರ ಕಾಯ್ದಿರಿಸದ ವಿಶೇಷ ರೈಲು ಹುಬ್ಬಳ್ಳಿಯಿಂದ ಬೆಳಿಗ್ಗೆ 05:10 ಗಂಟೆಗೆ ಹೊರಟು ಅದೇ ದಿನ ಸಂಜೆ 04:00 ಗಂಟೆಗೆ ಪಂಢರಪುರ ತಲುಪಲಿದೆ. ಇದು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಛಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ್, ಚಿಂಚಳಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ವಿಜಯನಗರ, ಮಿರಜ್, ಅರಗ, ಧಲಗಾಂವ, ಜತ್ ರೋಡ್, ವಾಸುದ, ಮತ್ತು ಸಂಗೋಲಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ರೈಲು ಸಂಖ್ಯೆ 07314 ಪಂಢರಪುರ–ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲು ಪಂಢರಪುರದಿಂದ ಸಂಜೆ 06:00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 04:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಹಿಂದಿನ ರೈಲು ನಿಲುಗಡೆ ಮಾಡಿದ ನಿಲ್ದಾಣಗಳಲ್ಲೇ ಹಿಮ್ಮುಖ ಕ್ರಮದಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲು 10 ಬೋಗಿಗಳನ್ನು (8 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು/ಅಂಗವಿಕಲ ಬೋಗಿಗಳು) ಒಳಗೊಂಡಿರುತ್ತದೆ.
ಈ ವಿಶೇಷ ಸೇವೆಗಳು ಪ್ರಯಾಣಿಕರಿಗೆ, ವಿಶೇಷವಾಗಿ ಆಷಾಢ ಏಕಾದಶಿ ಉತ್ಸವಗಳಿಗಾಗಿ ಪಂಢರಪುರಕ್ಕೆ ತೆರಳುವ ವಾರಕರಿಗಳು ಮತ್ತು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ನಿರೀಕ್ಷೆ ಇದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.