ದಾವಣಗೆರೆ: ಮತದಾನ ಮಾಡಲು ಅಮೆರಿಕಾ ದಿಂದ ತಾಯ್ನಾಡಿಗೆ ಬಂದಿದ್ದ ಮತದಾರ ರಾಘವೇಂದ್ರ ಕಮಲಕರ್ ಶೆಟ್ ಎಂವ ವ್ಯಕ್ತಿ ಮತಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದಿಂದ ವಂಚಿತರಾಗಿ ನಿರಾಸೆಯಿಂದ ಮನೆಗೆ ತೆರಳಿದ ಘಟನೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಂಸಿಸಿ ಎ ಬ್ಲಾಕ್ ನ ಬಕ್ಕೇಶ್ವರ ಶಾಲೆಯ ಬೂತ್ ನಂಬರ್ 78ರ ಮತಗಟ್ಟೆಯಲ್ಲಿ ನಡೆದಿದೆ.
ಅಮೆರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕಮಲಕರ್ ಶೆಟ್ , ತಾಯ್ನಾಡಿನಲ್ಲಿ ಮತದಾನ ಮಾಡುವ ಸಲುವಾಗಿ 1.50 ಲಕ್ಷ ರೂ. ಖರ್ಚು ಮಾಡಿಕೊಂಡು ಬಂದಿದ್ದಾರೆ. ಆದರೆ ಮತಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದಿಂದ ವಂಚಿತರಾಗಿದ್ದಾರೆ.
ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಅಮೆರಿಕಾದಲ್ಲಿ ಐಡಿ ಕಾಡ್೯ ಇದ್ದರೆ ಸಾಕು ಮತದಾನಕ್ಕೆ ಅವಕಾಶ ಇದೆ. ಆದರೆ ಭಾರತದಲ್ಲಿ ನನಗೆ ಐಡಿ ಕಾಡ್೯ ಇದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ನಾನು ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ. ಈವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಆದರೆ ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.