ಹಾವೇರಿ: ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ರಾಜ್ಯದ ಜನರು ಕಾಂಗ್ರೆಸ್‌ಗೆ ವೋಟ್ ಕೊಟ್ಟಿದ್ದರು. ಈಗ ಇದೊಂದು ಮೋಸಗಾರ ಸರಕಾರ ಎಂದು ಜನರೇ ವಿರೋಧ ಮಾಡಲು ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮೋಸದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಂತಾ ಜನರು ಪರಿತಪಿಸುತ್ತಿದ್ದಾರೆ. ಕೇಂದ್ರ ಸರಕಾರ ಅಕ್ಕಿ ಕೊಟ್ಟಿಲ್ಲ ಅಂತಾ ಕಾಂಗ್ರೆಸ್‌ನವರು ದಾರಿ ತಪ್ಪಿಸುತ್ತಿದ್ದಾರೆ. ಈ ಸರಕಾರ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಐದು ಗ್ಯಾರಂಟಿಗೆ ಎಲ್ಲಿಂದ ಹಣ ತರುತ್ತಿರಿ. ಕೇಂದ್ರ ಸರಕಾರದ ವಿರುದ್ಧ ಆಪಾದನೆ ಮಾಡುತ್ತಾ ಹೊರಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಬಂದ್ ಮಾಡಿದ್ದಾರೆ. ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ನಮ್ಮ ಸರಕಾರ ಬರಲಿಲ್ಲ ಎನ್ನುವುದು ತಾತ್ಕಾಲಿಕ ನಿರಾಶೆ ಅಷ್ಟೇ ಎಂದರು. ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸುತ್ತೆ. ರಾಜಕಾರಣದಲ್ಲಿ ಶಾಶ್ವತ ವೈರತ್ವ ಇರಲ್ಲ. ಕಾಂಗ್ರೆಸ್ ದೇಶದಲ್ಲಿ ಮಲಗಿ ಹೋಗಿದ್ದು ಅಲ್ಲಿಗೆ ಜಗದೀಶ್ ಶೆಟ್ಟರ್ ಸೇರಿಕೊಂಡಿದ್ದಾರೆ ಎಂದರು.
ಕಟೀಲ್ ಜೊತೆಗೆ ಮಾತನಾಡಿದ್ದೇನೆ. ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಐದು ವರ್ಷ ನಾನೇ ಸಿಎಂ ಅಂತಾ ಸಿದ್ದರಾಮಯ್ಯನವರು ಯಾವತ್ತು ಹೇಳುತ್ತಾರೋ ಅವತ್ತೆ ಕಾಂಗ್ರೆಸ್ ಸರಕಾರ ಬೀಳುತ್ತದೆ. 5 ಕೆಜಿ ಅಕ್ಕಿ ಕೊಡ್ತಿರೋದಕ್ಕೆ ಪ್ರಧಾನಮಂತ್ರಿಗಳಿಗೆ ಧನ್ಯವಾದ ಹೇಳಿದ್ರಾ ? ಕೇಂದ್ರದ ಮೇಲೆ ಗೂಬೆ ಕೂರಿಸ್ತಿದಾರೆ ಇದ್ಯಾವ ನ್ಯಾಯ ಎಂದು ಕಿಡಿಕಾರಿದ ಅವರು, ವಿಧಾನಸಭೆ ಸೋಲು ಕೆಟ್ಟ ಕನಸು ಅಂತಾ ನಾವು ಮರೆತಿದ್ದೇವೆ ಎಂದರು.
ಕಾಂತೇಶ ಹಾವೇರಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂತೇಶ ಹಾವೇರಿಯಿಂದ ಲೋಕಸಭೆಗೆ ನಿಲ್ಲಲು ಅಪೇಕ್ಷೆ ಪಡ್ತಿರೋದು ನಿಜ. ಕಾಂತೇಶ ಅಷ್ಟೆ ಅಲ್ಲ ಹಲವರು ಅಪೇಕ್ಷೆ ಪಟ್ಟಿದ್ದಾರೆ ತಪ್ಪಲ್ಲ. ಶಿವಕುಮಾರ್ ಉದಾಸಿ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯನವರು ಕುರುಬರು,ದಲಿತರಿಗೆ ದ್ರೋಹ ಮಾಡಿ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನವರಿಗೆ ಹಿಂದು ಅಂದ್ರೆ ದ್ವೇಷ, ಮುಸಲ್ಮಾನರು ಅಂದ್ರೆ ಬೀಗರು ಇದ್ದಹಾಗೆ. ಹಿಂದು ದೇವಾಲಯಗಳನ್ನು ಒಡೆದು ಮಸಿದಿ ಕಟ್ಟಿದ್ದರು. ಹಿಂದೂ ದೇವಾಲಯ ಒಡೆದು ಕಟ್ಟಿದ ಮಸೀದಿಗಳು ಮುಂದಿನ ದಿನಗಳಲ್ಲಿ ಉಳಿಯಲ್ಲ, ಅಲ್ಲಿ ಹಿಂದೂ ದೇವಾಲಯಗಳು ಬರುತ್ತವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಸಚಿವ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ಪ್ರಭು ಹಿಟ್ನಳ್ಳಿ ಇತರರು ಇದ್ದರು.