ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು ಮೂಡಿಸಿದ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ನಂದಿನಿ

ಬೆಂಗಳೂರು: ಅಪ್ಪಟ ಕನ್ನಡ ಬ್ರ್ಯಾಂಡ್‌ ನಂದಿನಿಯು $1,079 ಮಿಲಿಯನ್‌ (₹9,009.65 ಕೋಟಿ) ಮೌಲ್ಯದೊಂದಿಗೆ ‘ಬ್ರ್ಯಾಂಡ್‌ ಫೈನಾನ್ಸ್‌ 2025’ರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಳೆದ ವರ್ಷ ನಂದಿನಿ ಭಾರತದ ಟಾಪ್‌ 100 ಅಮೂಲ್ಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 43ನೇ ಸ್ಥಾನದಲ್ಲಿತ್ತು. ಬ್ರ್ಯಾಂಡ್‌ ಫೈನಾನ್ಸ್‌ ಲಂಡನ್‌ ಮೂಲದ ಅಂತರರಾಷ್ಟ್ರೀಯ ಸಲಹಾ ಸಂಸ್ಥೆಯಾಗಿದೆ. ಆಹಾರ ಮತ್ತು ಪಾನೀಯ ವಿಭಾಗದಲ್ಲಿ 4ನೇ ಸ್ಥಾನ ಪಡೆದಿರುವ ನಂದಿನಿಯು ಅಮುಲ್‌, ಬ್ರಿಟಾನಿಯಾ ಮತ್ತು ಮದರ್‌ ಡೈರಿಗಳಂತಹ ದೊಡ್ಡದೊಡ್ಡ ಬ್ರ್ಯಾಂಡ್‌ಗಳ ಜೊತೆಗೆ ಸ್ಪರ್ಧಿಸುತ್ತಿದೆ. ನಂದಿನಿಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಸರ್ಕಾರದ ಸಂಕಲ್ಪ, ರೈತರ ಶ್ರಮ ಮತ್ತು ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿಬಿಂಬವಾಗಿದೆ ಎಂದಿದ್ದಾರೆ.