ಮಾಸ್ಕೋ: ರಷ್ಯಾದ ವಿಜ್ಞಾನಿಗಳು ಈಗ ಹೊಸ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಅದು ಈಗ ಕ್ಲಿನಿಕಲ್ ಬಳಕೆಗೆ ಸಿದ್ಧವಾಗಿದೆ ಎಂದು ಫೆಡರಲ್ ಮೆಡಿಕಲ್ ಆಂಡ್ ಬಯೋಲಾಜಿಕಲ್ (ಎಫ್‌ಎಂಬಿಎ) ಸಂಸ್ಥೆ ಪ್ರಕಟಿಸಿದೆ.
ಪೂರ್ವ ಆರ್ಥಿಕ ವೇದಿಕೆಯಲ್ಲಿ ಎಫ್‌ಎಂಬಿಎ ಮುಖ್ಯಸ್ಥೆ ವೆರೋನಿಕಾ ಸ್ಕೊಟ್ಸೋವಾ ಈ ವಿಷಯವನ್ನು ಘೋಷಣೆ ಮಾಡಿದ್ದಾರೆ. ಎಂಟರೋಮಿಕ್ಸ್ ಎಂದು ಕರೆಯಲ್ಪಡುವ ಈ ಲಸಿಕೆಯು ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಆಧರಿಸಿದೆ. ಕೋವಿಡ್-19 ಲಸಿಕೆ ವಿಧಾನವನ್ನೇ ಇಲ್ಲಿ ಬಳಸಲಾಗಿದೆ. ದುರ್ಬಲಗೊಂಡ ವೈರಸ್ ಅನ್ನು ಬಳಸುವ ಬದಲಿಗೆ ದೇಹದ ಜೀವಕೋಶಗಳಿಗೆ ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಪ್ರೋಟಿನ್‌ಗಳನ್ನು ಉತ್ಪಾದಿಸಲು ಕಲಿಸುತ್ತದೆ.
ಲಸಿಕೆಯು ಮೂರು ವರ್ಷಗಳ ಪೂರ್ವಭಾವಿ ಪ್ರಯೋಗಗಳನ್ನು ಒಳಗೊಂಡಂತೆ ವರ್ಷಾನುಗಟ್ಟಲೆ ಸಂಶೋಧನೆಯನ್ನು ಪೂರ್ಣಗೊಳಿಸಿದೆ ಎಂದವರು ವಿವರಿಸಿದ್ದಾರೆ. ಪುನರಾವರ್ತಿತ ಡೋಸ್‌ಗಳೊಂದಿಗೆ ಲಸಿಕೆಯೂ ಸುರಕ್ಷಿತವಾಗಿದೆ ಮತ್ತು ಪರಿಣಾಮಕಾರಿಯಾಗಿದೆ. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಪ್ರಕಾರವನ್ನು ಅವಲಂಬಿಸಿ ಕ್ಯಾನ್ಸರ್ ಗೆಡ್ಡೆಗಳನ್ನು ಶೇ. 60ರಿಂದ 80ರಷ್ಟು ಕುಗ್ಗಿಸುತ್ತವೆ ಅಥವಾ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ದೊಡ್ಡ ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಈ ಲಸಿಕೆಯನ್ನು ಆರಂಭಿಕವಾಗಿ ಅಭಿವೃದ್ಧಿಪಡಿಸಲಾಗಿದೆ.
ಮೆಡ್‌ಪಾತ್‌ನ ವರದಿಯ ಪ್ರಕಾರ, ಎಂಟರೊಮಿಕ್ಸ್ ಕ್ಯಾನ್ಸರ್ ಗೆಡ್ಡೆಗಳ ಮೇಲೆ ದಾಳಿ ಮಾಡಿ ನಾಶಮಾಡಲು ನಾಲ್ಕು ನಿರುಪದ್ರವ ವೈರಸ್‌ಗಳನ್ನು ಬಳಸುತ್ತದೆ ಮತ್ತು ರೋಗದ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಹಲವಾರು ವರ್ಷಗಳ ಪರೀಕ್ಷೆಯ ನಂತರ, ಇದು ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ನಾಶಮಾಡುವಲ್ಲಿ ಪರಿಣಾಮಕಾರಿತ್ವವನ್ನು ತೋರಿಸಿದೆ. ಪ್ರಯೋಗಗಳು ಮುಗಿದ ನಂತರ, ಉಳಿದಿರುವ ಏಕೈಕ ಹಂತವೆಂದರೆ ನಿಯಂತ್ರಕ ಅನುಮತಿ. ಅನುಮೋದನೆ ದೊರೆತರೆ, ಎಂಟರೊಮಿಕ್ಸ್ ಸಾರ್ವಜನಿಕರಿಗೆ ಲಭ್ಯವಿರುವ ಮೊದಲ ವೈಯಕ್ತಿಕಗೊಳಿಸಿದ ಎಮ್‌ಆರ್‌ಎನ್‌ಎ ಕ್ಯಾನ್ಸರ್ ಲಸಿಕೆಯಾಗಬಹುದು.