ನಾವೆಲ್ಲರೂ ಆರೋಗ್ಯವಾಗಿರಲು ಹಣ್ಣು, ಹಾಲು, ತುಪ್ಪದಂತಹ ಪೌಷ್ಟಿಕ ಆಹಾರಗಳನ್ನು ತಿನ್ನುತ್ತೇವೆ. ಆದರೆ, “ಯಾವ ಆಹಾರವನ್ನು ಯಾವುದರ ಜೊತೆ ತಿನ್ನಬಾರದು” ಎಂಬ ಕನಿಷ್ಠ ಜ್ಞಾನವಿಲ್ಲದಿದ್ದರೆ, ನಾವು ತಿನ್ನುವ ಅಮೃತವೇ ಹೊಟ್ಟೆಯಲ್ಲಿ ‘ವಿಷ’ವಾಗಿ (ಸ್ಲೋ ಪಾಯಿಸನ್) ಬದಲಾಗುತ್ತದೆ.
ಆಯುರ್ವೇದದಲ್ಲಿ ಇದನ್ನು ‘ವಿರುದ್ಧ ಆಹಾರ’ ಎಂದು ಕರೆಯಲಾಗುತ್ತದೆ. ತಪ್ಪು ಕಾಂಬಿನೇಷನ್‌ನಿಂದ ತಿಂದಾಗ ಆಹಾರವು ಸರಿಯಾಗಿ ಜೀರ್ಣವಾಗದೆ, ಹೊಟ್ಟೆಯಲ್ಲಿ ‘ಆಮ’ (ಟಾಕ್ಸಿನ್/ವಿಷ) ಉತ್ಪತ್ತಿಯಾಗುತ್ತದೆ. ಇದು ಮುಂದೆ ಚರ್ಮರೋಗ, ಗ್ಯಾಸ್ಟ್ರಿಕ್, ಅಲರ್ಜಿ ಹಾಗೂ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳಿಗೆ ದಾರಿಯಾಗುತ್ತದೆ.
ಹಾಗಾದರೆ, ಯಾವೆಲ್ಲಾ ಆಹಾರಗಳನ್ನು ಒಟ್ಟಿಗೆ ತಿನ್ನಬಾರದು ಎಂಬುದರ ರೋಚಕ ಮಾಹಿತಿ ಇಲ್ಲಿದೆ.
ಹಾಲಿನ ಜೊತೆ ಈ ತಪ್ಪು ಮಾಡಲೇಬೇಡಿ: ಹಾಲು ಸಂಪೂರ್ಣ ಆಹಾರ ಹೌದು, ಆದ್ರೆ ಹಾಲಿನ ಜೊತೆ ಕಿತ್ತಳೆ, ನಿಂಬೆ, ಹುಣಸೆ ಅಥವಾ ಮೊಸರಿನಂತಹ ಯಾವುದೇ ಹುಳಿ ಪದಾರ್ಥಗಳನ್ನು ಸೇರಿಸಬೇಡಿ. ಇದು ಹಾಲನ್ನು ಹೊಟ್ಟೆಯಲ್ಲಿ ಒಡೆದು ಆಸಿಡ್ ಆಗಿ ಮಾರ್ಪಡಿಸುತ್ತದೆ. ಹಾಗೆಯೇ ಉಪ್ಪಿನಕಾಯಿ, ಕರಿದ ತಿಂಡಿಗಳು, ಖಾರದ ಪದಾರ್ಥಗಳು ಮತ್ತು ಮಾಂಸಾಹಾರದ ಜೊತೆ ಹಾಲು ಕುಡಿಯುವುದು ಚರ್ಮದ ಬಿಳಿ ಮಚ್ಚೆ (Vitiligo) ಹಾಗೂ ಅಲರ್ಜಿಗೆ ಪ್ರಮುಖ ಕಾರಣ. ಕಲ್ಲಂಗಡಿ ಮತ್ತು ಬಾಳೆಹಣ್ಣಿನೊಂದಿಗೆ ಹಾಲನ್ನು ಮಿಕ್ಸ್ ಮಾಡಿ ‘ಮಿಲ್ಕ್ ಶೇಕ್’ ಮಾಡುವುದು ಕೂಡ ಜೀರ್ಣಕ್ರಿಯೆಗೆ ದೊಡ್ಡ ಪೆಟ್ಟು ನೀಡುತ್ತದೆ.
ಮೊಸರು ಮತ್ತು ಜೇನುತುಪ್ಪದ ಕಠಿಣ ನಿಯಮಗಳು: ಮೊಸರು ತಂಪಾದರೂ, ಅದನ್ನು ಬಿಸಿಬಿಸಿ ಅನ್ನದ ಜೊತೆ ಬೆರೆಸಿ ತಿನ್ನಬಾರದು. ಹಾಲು, ಪನೀರ್, ಪಾಯಸ, ಮೂಲಂಗಿ ಹಾಗೂ ಕಲ್ಲಂಗಡಿ ಜೊತೆ ಮೊಸರು ಸೇರಿಸುವುದು ಆರೋಗ್ಯಕ್ಕೆ ಹಾನಿಕಾರಕ. ಆಯುರ್ವೇದದ ಪ್ರಕಾರ ರಾತ್ರಿ ಹೊತ್ತು ಮೊಸರು ತಿಂದರೆ ಕಫ ಕಟ್ಟುತ್ತದೆ.
ಇನ್ನು ಜೇನುತುಪ್ಪವನ್ನು ಎಂದಿಗೂ ಒಲೆಯ ಮೇಲಿಟ್ಟು ಬಿಸಿ ಮಾಡಬಾರದು ಅಥವಾ ಕುದಿಯುವ ನೀರಿಗೆ ಹಾಕಬಾರದು. ಬಿಸಿಯಾದಾಗ ಜೇನುತುಪ್ಪದಲ್ಲಿರುವ ಕಿಣ್ವಗಳು ಸತ್ತು ಅದು ಅಂಟುಗಂಟಾದ ವಿಷವಾಗಿ ಬದಲಾಗುತ್ತದೆ. ನೆನಪಿರಲಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ತಿಂದರೆ ಅದು ನೇರವಾಗಿ ಪ್ರಾಣಕ್ಕೆ ಕುತ್ತು ತರುತ್ತದೆ.

ನೀರು ಕುಡಿಯುವಾಗ ಇರಲಿ ಎಚ್ಚರ: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ ತಕ್ಷಣ ದಾಹವಾಯಿತೆಂದು ತಣ್ಣೀರು ಕುಡಿಯಬೇಡಿ. ಇದು ವಿಪರೀತ ಹೊಟ್ಟೆ ಉಬ್ಬರ ಸೃಷ್ಟಿಸುತ್ತದೆ. ಕಡಲೆಕಾಯಿ (ಶೇಂಗಾ), ಸೌತೆಕಾಯಿ, ಪೇರಲೆ ಹಣ್ಣು ತಿಂದ ಮೇಲೂ ನೀರು ಕುಡಿದರೆ ಕೆಮ್ಮು ಮತ್ತು ಕಫ ಗ್ಯಾರಂಟಿ. ಕನಿಷ್ಠ 30 ನಿಮಿಷಗಳ ಅಂತರ ಕಾಯ್ದುಕೊಳ್ಳಿ.
ಪಾತ್ರೆಗಳು ಮಾಡುತ್ತವೆ ಮೋಸ: ನಾವು ತಿನ್ನುವ ಆಹಾರ ಮಾತ್ರವಲ್ಲ, ಅದನ್ನು ಇಡುವ ಪಾತ್ರೆಯೂ ವಿಷವಾಗಬಹುದು. ಬಿಸಿಬಿಸಿ ಸಾರು ಅಥವಾ ಅನ್ನವನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಹಾಕುವುದು ಕ್ಯಾನ್ಸರ್‌ಗೆ ಆಹ್ವಾನ ನೀಡಿದಂತೆ. ಅದೇ ರೀತಿ, ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳಲ್ಲಿ ಮೊಸರು, ಮಜ್ಜಿಗೆ, ನಿಂಬೆರಸ, ಬೆಣ್ಣೆಯನ್ನು ಇಡಲೇಬಾರದು. ಹುಳಿ ಅಂಶವು ಲೋಹದೊಂದಿಗೆ ರಾಸಾಯನಿಕ ಕ್ರಿಯೆ (Chemical Reaction) ನಡೆಸಿ, ಆಹಾರವನ್ನು ಕಲುಷಿತಗೊಳಿಸುತ್ತದೆ. ಇದಕ್ಕೆ ಬದಲಾಗಿ ಮಣ್ಣಿನ, ಗಾಜಿನ ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಅತ್ಯಂತ ಸುರಕ್ಷಿತ.
ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮ: ಕಿತ್ತಳೆ, ಮೋಸಂಬಿಯಂತಹ ಸಿಟ್ರಸ್ ಹಣ್ಣುಗಳನ್ನು ಹಾಲಿನ ಜೊತೆ ತಿಂದರೆ ಹಾಲಿನ ಪ್ರೋಟೀನ್ ನಾಶವಾಗುತ್ತದೆ. ಪಪ್ಪಾಯಿ ಹಣ್ಣಿನ ಮೇಲೆ ನಿಂಬೆರಸ ಹಿಂಡಿ ತಿಂದರೆ ಭಾರಿ ಎದೆಯುರಿ ಬರುತ್ತದೆ. ಅನ್ನ ಅಥವಾ ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್ಸ್ ಜೊತೆ ಹುಳಿ ಹಣ್ಣುಗಳನ್ನು ತಿಂದರೆ ದೇಹಕ್ಕೆ ಶಕ್ತಿ ಸಿಗುವುದಿಲ್ಲ. ಊಟವಾದ ತಕ್ಷಣ ಯಾವುದೇ ಹಣ್ಣು ತಿಂದರೂ ಅದು ಹೊಟ್ಟೆಯಲ್ಲಿ ಕೊಳೆತು ಗ್ಯಾಸ್ ಆಗುತ್ತದೆ. ಹೀಗಾಗಿ ಊಟಕ್ಕೂ ಮುನ್ನ ಅಥವಾ ಊಟವಾದ 2 ಗಂಟೆಯ ಬಳಿಕ ಹಣ್ಣು ತಿನ್ನುವುದು ಜಾಣತನ.
ನಾಲಿಗೆಯ ರುಚಿಗಾಗಿ ಬೇಕಾಬಿಟ್ಟಿ ಮಿಕ್ಸ್ ಮಾಡಿ ತಿನ್ನುವ ಅಭ್ಯಾಸ ಬಿಡಿ, ನೈಸರ್ಗಿಕ ನಿಯಮಗಳನ್ನು ಪಾಲಿಸಿ, ಆಸ್ಪತ್ರೆಯ ಖರ್ಚು ಉಳಿಸಿ.























