‘ಬನಾರಸ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಝೈದ್ ಖಾನ್ ಇದೀಗ ಪಕ್ಕಾ ಮಾಸ್ ಮತ್ತು ಲವ್ ಎಂಟರ್ಟೈನರ್ ‘ಕಲ್ಟ್’ ಚಿತ್ರದ ಮೂಲಕ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಗಣರಾಜ್ಯೋತ್ಸವದ ಸಂಭ್ರಮಕ್ಕೆ ಉಡುಗೊರೆಯಾಗಿ, ಇದೇ ಜನವರಿ 23ರಂದು ರಾಜ್ಯಾದ್ಯಂತ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಹೈಪ್ ಸೃಷ್ಟಿಸಿರುವ ಚಿತ್ರತಂಡ, ಇದೀಗ ‘ನಿನ್ನಲ್ಲೇ ನಾನಿರೇ…’ ಎಂಬ ಎಮೋಷನಲ್ ಹಾಡನ್ನು ಬಿಡುಗಡೆ ಮಾಡಿದೆ. ಪ್ರೇಮ ವೈಫಲ್ಯ ಅನುಭವಿಸಿದವರ ಕಣ್ಣಲ್ಲಿ ನೀರು ತರಿಸುವಂತಿರುವ ಈ ಪ್ಯಾಥೋಸ್ ಗೀತೆಗೆ ಸಾಹಿತ್ಯ ಬರೆದಿರುವುದು ನಿರ್ದೇಶಕ ಅನಿಲ್ ಕುಮಾರ್ ಟಿ.ಎಂ ಮತ್ತು ನಿಶಾನ್ ರೈ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡನ್ನು ನಿಶಾನ್ ರೈ ಅವರೇ ಹಾಡಿದ್ದು, ಕೇಳುಗರ ಮನಮುಟ್ಟಿದೆ. ಹಾಡಿನಲ್ಲಿ ಝೈದ್ ಖಾನ್ ನಟನೆಯೂ ಗಮನ ಸೆಳೆದಿದೆ.
ಹಿಟ್ ಹಾಡುಗಳ ಸರಮಾಲೆ: ಈಗಾಗಲೇ ಬಿಡುಗಡೆಯಾಗಿರುವ ‘ಅಯ್ಯೋ ಶಿವನೇ…’ ಹಾಡು ದ್ವಾಪರ ಖ್ಯಾತಿಯ ಜಸ್ಕರಣ್ ಸಿಂಗ್ ಕಂಠಸಿರಿಯಲ್ಲಿ ಮಿಲಿಯನ್‌ಗಟ್ಟಲೆ ಹಿಟ್ಸ್ ದಾಖಲಿಸಿದೆ. ಹಾಗೆಯೇ ‘ಬ್ಲಡಿ ಲವ್’ ಹಾಡು ಕೂಡ ಯುವಜನತೆಯನ್ನು ಸೆಳೆದಿದೆ. ಈ ಚಿತ್ರದ ಹಾಡುಗಳ ಕ್ರೇಜ್ ಎಷ್ಟಿದೆಯೆಂದರೆ, ಆನಂದ್ ಆಡಿಯೋ ಸಂಸ್ಥೆ ಭಾರೀ ಮೊತ್ತ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.
ತಾರಾಬಲ: ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ನಾಯಕಿಯರಾಗಿ ಮಿಂಚಿದ್ದಾರೆ. ಲೋಕಿ ಸಿನಿಮಾಸ್ ನಿರ್ಮಾಣದ ಈ ಚಿತ್ರವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುತ್ತಿದೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುವ ಹಂತದಲ್ಲಿದ್ದು, ಜನವರಿ 23ರ ಲಾಂಗ್ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ‘ಕಲ್ಟ್’ ಟೀಮ್ ಸಕಲ ತಯಾರಿ ನಡೆಸಿದೆ. ಝೈದ್ ಖಾನ್ ಮಾಸ್ ಲುಕ್ ಮತ್ತು ಲವ್ ಸ್ಟೋರಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
