ಬೆಂಗಳೂರು: ‘ಕೆಜಿಎಫ್’ ಎಂಬ ಬ್ಲಾಕ್‌ಬಸ್ಟರ್ ನಂತರ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ‘ಟಾಕ್ಸಿಕ್’ ಮೇಲೆ ನಿರೀಕ್ಷೆಯ ಬೆಟ್ಟವೇ ನಿರ್ಮಾಣವಾಗಿದೆ. ಆದರೆ, ಈ ನಿರೀಕ್ಷೆಯ ಜೊತೆಯಲ್ಲೇ, ಸಿನಿಮಾದ ಬಗ್ಗೆ ಇಲ್ಲಸಲ್ಲದ ವದಂತಿಗಳು ಕೂಡ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಲು ಶುರುಮಾಡಿದ್ದವು.
ಚಿತ್ರದ ರೀ-ಶೂಟ್ ನಡೆಯುತ್ತಿದೆ, ಬಿಡುಗಡೆ ವಿಳಂಬವಾಗಲಿದೆ ಎಂಬಂತಹ ನಕಾರಾತ್ಮಕ ಸುದ್ದಿಗಳಿಗೆ ಇದೀಗ ಚಿತ್ರತಂಡದ ಆಪ್ತ ಮೂಲದಿಂದಲೇ ಸ್ಪಷ್ಟನೆ ಸಿಕ್ಕಿದ್ದು, ದ್ವೇಷ ಹರಡುವವರ ಬಾಯಿಗೆ ಬೀಗ ಬಿದ್ದಿದೆ.
ಏನಿದು ಸುಳ್ಳು ಸುದ್ದಿಯ ಹಿಂದಿನ ಕಥೆ?: ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ಸರಿಯಾಗಿ ಬಂದಿಲ್ಲ, ಹಾಗಾಗಿ ಚಿತ್ರತಂಡ ರೀ-ಶೂಟ್ ಮಾಡಲು ನಿರ್ಧರಿಸಿದೆ,” “ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಯಶ್ ನಡುವೆ ಸರಿ ಇಲ್ಲ,” “ಯಶ್‌ಗೆ ಚಿತ್ರದ ಫೂಟೇಜ್ ನೋಡಿ ಖುಷಿಯಾಗಿಲ್ಲ,” ಎಂಬಂತಹ ಸುದ್ದಿಗಳನ್ನು ‘ಪಾನಿಪುರಿ’ ಎಂಬ ಟ್ವಿಟರ್ ಖಾತೆಯೊಂದು ವ್ಯವಸ್ಥಿತವಾಗಿ ಹಬ್ಬಿಸುತ್ತಿತ್ತು. ಇದು ಯಶ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
ಸಾಕ್ಷಿ ಸಮೇತ ಸಿಕ್ಕ ಸ್ಪಷ್ಟನೆ: ಈ ಎಲ್ಲಾ ವದಂತಿಗಳಿಗೆ ಇದೀಗ ಚಿತ್ರದ ಪೋಸ್ಟ್-ಪ್ರೊಡಕ್ಷನ್ ತಂಡದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರೇ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ. ಚಿತ್ರದ ವಿಎಫ್‌ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪ್ರಣಿಲ್ ದೇಶಮುಖ್ ಎಂಬುವವರು, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
“ನನಗೆ ನಗು ತಡೆಯಲು ಆಗುತ್ತಿಲ್ಲ. ನನ್ನ ಸಹೋದ್ಯೋಗಿಗಳು ಈ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಈ ವ್ಯಕ್ತಿ ಸಿನಿಮಾ ರೀ-ವರ್ಕ್ ಆಗುತ್ತಿದೆ ಎಂದು ಹೇಳುತ್ತಿದ್ದಾರೆ,” ಎಂದು ಪ್ರಣಿಲ್ ದೇಶಮುಖ್ ಟ್ವೀಟ್ ಮಾಡುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಈ ಸ್ಪಷ್ಟನೆಯಿಂದ ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ ಎಂಬುದು ಖಚಿತವಾಗಿದೆ. ಇದು ಯಶ್ ಬಗ್ಗೆ ಆಗದವರು ಮಾಡುತ್ತಿರುವ ಕಿತಾಪತಿ ಎಂಬುದು ಸ್ಪಷ್ಟವಾಗಿದೆ.
ತೆರೆಗೆ ಬರುವುದು ಯಾವಾಗ?: ಮೂಲಗಳ ಪ್ರಕಾರ, ಸಿನಿಮಾವು ಈ ಹಿಂದೆ ಘೋಷಿಸಿದಂತೆ 2026ರ ಮಾರ್ಚ್ 19 ರಂದೇ ವಿಶ್ವಾದ್ಯಂತ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು, ಯಶ್ ಹುಟ್ಟುಹಬ್ಬವಾದ ಜನವರಿಯಲ್ಲಿ ಚಿತ್ರದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬೀಳುವ ನಿರೀಕ್ಷೆಯಿದೆ. ‘ಟಾಕ್ಸಿಕ್’ ಕುರಿತ ನಕಾರಾತ್ಮಕ ಸುದ್ದಿಗಳಿಗೆ ಅಧಿಕೃತ ಮೂಲದಿಂದಲೇ ಉತ್ತರ ಸಿಕ್ಕಂತಾಗಿದ್ದು, ಯಶ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

























