ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಕ್ಯೂಟ್ ಜೋಡಿ ಎಂದೇ ಖ್ಯಾತರಾಗಿರುವ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಮತ್ತು ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಮದುವೆಯ ಸುದ್ದಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಮೂಡಿಸಿವೆ. ಅಭಿಮಾನಿಗಳು ಪ್ರೀತಿಯಿಂದ ಕರೆದ ‘VIROSH’ ಎಂಬ ಹೆಸರಿನಲ್ಲೇ ಈ ಮದುವೆ ಸಮಾರಂಭ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎರಡು ಸಂಬಂಧಗಳ ಮಿಲನ: ಮೂಲಗಳ ಪ್ರಕಾರ, ಫೆಬ್ರವರಿ 26ರಂದು ಈ ಜೋಡಿ ಹಸೆಮಣೆ ಏರಲಿದೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಈ ಮದುವೆಯು ಎರಡು ವಿಭಿನ್ನ ಸಂಪ್ರದಾಯಗಳ ಸಂಗಮವಾಗಲಿದೆ. ಮುಂಜಾನೆ ವಿಜಯ್ ದೇವರಕೊಂಡ ತೆಲುಗು ಸಂಪ್ರದಾಯದಂತೆ ವಿಧಿವಿಧಾನಗಳು ನಡೆದರೆ, ಅದೇ ದಿನ ರಾತ್ರಿ ರಶ್ಮಿಕಾ ಹುಟ್ಟೂರು ಕೊಡಗಿನ ವೈಶಿಷ್ಟ್ಯಪೂರ್ಣ ‘ಕೊಡವ’ ಶೈಲಿಯಲ್ಲಿ ಮದುವೆ ನೆರವೇರಲಿದೆ ಎಂದು ವರದಿಯಾಗಿದೆ. ಈ ಮೂಲಕ ಇಬ್ಬರೂ ಪರಸ್ಪರರ ಸಂಸ್ಕೃತಿಗೆ ಗೌರವ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಿರಿಯರ ವಿಶೇಷ ಉಡುಗೊರೆ: ಇತ್ತೀಚೆಗೆ ನಡೆದ ಖಾಸಗಿ ಸಂಗೀತ ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ ತಾಯಿ, ತಮ್ಮ ಕುಟುಂಬದ ಪರಂಪರೆಯಿಂದ ಬಂದ ಅಮೂಲ್ಯವಾದ ಬಂಗಾರದ ಬಳೆಗಳನ್ನು ರಶ್ಮಿಕಾಗೆ ತೊಡಿಸಿದ್ದಾರೆ ಎನ್ನಲಾಗುತ್ತಿದೆ. ಇದು ಕೇವಲ ಉಡುಗೊರೆಯಲ್ಲದೆ, ರಶ್ಮಿಕಾ ಅಧಿಕೃತವಾಗಿ ತಮ್ಮ ಮನೆಗೆ ಬರಮಾಡಿಕೊಳ್ಳುವ ಒಂದು ಸಂಕೇತವಾಗಿ ಕಂಡುಬರುತ್ತಿದೆ.
ಆಪ್ತರಿಗಷ್ಟೇ ಆಹ್ವಾನ: ಅದ್ದೂರಿತನಕ್ಕಿಂತ ಹೆಚ್ಚಾಗಿ ಖಾಸಗಿತನಕ್ಕೆ ಆದ್ಯತೆ ನೀಡುತ್ತಿರುವ ಈ ಜೋಡಿ, ಕೇವಲ ಕುಟುಂಬದ ಸದಸ್ಯರು ಮತ್ತು ಚಿತ್ರರಂಗದ ತೀರಾ ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಿದ್ದಾರೆ. ಅತಿಥಿಗಳ ಪಟ್ಟಿಯಲ್ಲಿ ನಟಿ ಆಶಿಕಾ ರಂಗನಾಥ್, ನಟಿ ಈಶಾ ರೆಬ್ಬಾ ಸೇರಿದಂತೆ ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ, ತರುಣ್ ಭಾಸ್ಕರ್ ಮತ್ತು ರಾಹುಲ್ ರವೀಂದ್ರನ್ ಹೆಸರುಗಳು ಕೇಳಿಬರುತ್ತಿವೆ.
ಸತ್ಯಾಸತ್ಯತೆ ಏನು?: ಅಭಿಮಾನಿಗಳು ಈ ಸುದ್ದಿಯನ್ನು ಕಂಡು ಸಂಭ್ರಮಿಸುತ್ತಿದ್ದರೂ, ರಶ್ಮಿಕಾ ಅಥವಾ ವಿಜಯ್ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತವಾಗಿ ಯಾವ ಮಾಹಿತಿಯನ್ನು ಪ್ರಕಟಣೆ ನೀಡಿಲ್ಲ. ಈ ಜೋಡಿ ‘ಗೀತ ಗೋವಿಂದಂ’ ಸಿನಿಮಾದಿಂದ ಶುರುವಾದ ಇವರ ಕೆಮಿಸ್ಟ್ರಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂಬುದು ಲಕ್ಷಾಂತರ ಅಭಿಮಾನಿಗಳ ಆಶಯವಾಗಿತ್ತು ಅದೇ ರೀತಿ ಈಗ ಈ ಸಿನಿ ಜೋಡಿಗಳು ‘VIROSH’ ಇದೇ ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ.























